

ಗುಂಡ್ಲುಪೇಟೆ: ಪಟ್ಟಣದಲ್ಲಿ ಲೋಕಾಯುಕ್ತ ಪೊಲೀಸರು ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.
ಪಟ್ಟಣದ ಹೊಸ ಪ್ರವಾಸಿ ಮಂದಿರದಲ್ಲಿ ಬುಧವಾರ ಲೋಕಾಯುಕ್ತ ಡಿವೈಎಸ್‌ಪಿ ಮಾಥ್ಯೂ ಥಾಮಸ್ ಪಿಂಚಣಿ, ಜಮೀನು, ವೇತನ ಮತ್ತು ಗ್ರಾಮ ಪಂಚಾಯತಿಯಲ್ಲಿ ಇ- ಸ್ವತ್ತು ಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿದರು. ಪಟ್ಟಣದ ನಿವಾಸಿ ಶಿವಣ್ಣ ಎಂಬುವರ ಪತ್ನಿ ಭಾಗ್ಯ ತಮಗೆ ಪಿಂಚಣಿಯ ಬಾಕಿ ಹಣವನ್ನು ನೀಡಲು ಖಜಾನೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ದೂರು ನೀಡಿದರು. ಇದಕ್ಕೆ ಖಜಾನೆ ಅಧಿಕಾರಿ ನಿಯಮದಂತೆ ಈಗಾಗಲೇ ಬ್ಯಾಂಕಿನವರಿಗೆ ಪತ್ರದ ಮೂಲಕ ತಿಳಿಸಲಾಗಿದೆ ಎಂದು ಉತ್ತರಿಸಿದರು.
ಬೇಗೂರು ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ನೀಡಲು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ತಾಪಂ ಇಒ ಕಾಂತರಾಜೇ ಅರಸ್ ಅಗತ್ಯ ದಾಖಲೆಗಳನ್ನು ಹೊಂದಿರುವ ಅರ್ಜಿದಾರರಿಗೆ ಇ-ಸ್ವತ್ತು ನೀಡಲಾಗುತ್ತಿದೆ. ಸೂಕ್ತ ದಾಖಲೆ ಒದಗಿಸಿದರೆ ಮಾತ್ರ ಇ-ಸ್ವತ್ತು ನೀಡಲಾಗುತ್ತದೆ ಎಂದು ಹೇಳಿದರು.
ವಡ್ಡಗೆರೆ ಗ್ರಾಮದ ಶಿವಸ್ವಾಮಿ ಎಂಬ ರೈತ 2015ರಲ್ಲಿ ಲೋಕಾಯುಕ್ತರಿಗೆ ರಸ್ತೆ ತೆರವುಗೊಳಿಸುವಂತೆ ದೂರು ಸಲ್ಲಿಸಿದ್ದರು. ತಾಪಂ ಅಧಿಕಾರಿಗಳು ಈವರೆಗೆ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಈ ಬಗ್ಗೆ ಬೆಂಗಳೂರಿನ ಲೋಕಾಯುಕ್ತದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಅಧಿಕಾರಿಗಳು ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂದು ದೂರಿದರು.
ಸಮಾಜ ಕಲ್ಯಾಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಳೆದ 9 ತಿಂಗಳಿಂದ ವೇತನ ನೀಡಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಮಾಥ್ಯೂ ಥಾಮಸ್, ಶೀಘ್ರದಲ್ಲೇ ವೇತನ ಬಿಡುಗಡೆಗೆ ಕ್ರಮ ವಹಿಸಿ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ಆದೇಶಿಸಿದರು.
ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ್, ಬಫರ್ ವಲಯದ ಆರ್‌ಎಫ್‌ಒ ನವೀನ್‌ಕುಮಾರ್, ಮೂಲೆಹೊಳೆ ವಲಯದ ಆರ್‌ಎಫ್‌ಒ ನರೇಶ್, ಪುರಸಭೆ, ಖಜಾನೆ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಶಿಕುಮಾರ್, ರವಿಕುಮಾರ್ ಇತರರು ಹಾಜರಿದ್ದರು.