

ಗುಂಡ್ಲುಪೇಟೆ: ಅಂಗಾರಕ ಚತುರ್ಥಿ ಹಿನ್ನೆಲೆಯಲ್ಲಿ ಪಟ್ಟಣದ ಪ್ರಸಿದ್ಧ ಶ್ರೀ ರಾಮೇಶ್ವರ ದೇವಾಲಯದಲ್ಲಿ ಮಂಗಳವಾರ ಶ್ರೀ ಗಣಪತಿ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ಅವರ ನೇತೃತ್ವದಲ್ಲಿ ಅಂಗಾರಕ ಚತುರ್ಥಿಯ ವಿಶೇಷ ಪೂಜೆಯನ್ನು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಪೂಜೆಗೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ಹಾಗೂ ಬಾದಾಮಿ ಹಾಲು ವಿತರಣೆ ಮಾಡಲಾಯಿತು.
ಅಂತೆಯೇ ಬಲಮುರಿ ಗಣಪತಿ ದೇವಾಲಯದಲ್ಲಿಯೂ ಅಂಗಾರಕ ಚತುರ್ಥಿ ಅಂಗವಾಗಿ ಬಲಮುರಿ ಗಣಪತಿ ಮೂರ್ತಿಗೆ ಬೆಳ್ಳಿಯ ಮುಖವಾಡ ಧರಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅರ್ಚಕ ವಿದ್ಯಾಶಂಕರ ಹಾಗೂ ಶಶಿಕಾಂತ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.