ಗುಂಡ್ಲುಪೇಟೆಯಲ್ಲಿ ಬಸವ ಜಯಂತಿ ಆಚರಣೆ

24-GPT-1
Published on

ಗುಂಡ್ಲುಪೇಟೆ: ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಸಂಪನ್ನಗೊಂಡಿತು.

ಬೆಳಗ್ಗೆ 9.30ಕ್ಕೆ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಅಲಂಕೃತ ವಾಹನದಲ್ಲಿ ಇರಿಸಿದ್ದ ಬಸವೇಶ್ವರ ಭಾವಚಿತ್ರಕ್ಕೆ ಸೋಮಹಳ್ಳಿ ವೀರಸಿಂಹಾಸನ ಶಿಲಾ ಮಠಾಧ್ಯಕ್ಷ ಸಿದ್ದಮಲ್ಲಪ್ಪಸ್ವಾಮೀಜಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್, ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ಮಹಾಸಭಾ ಜಿಲ್ಲಾಧ್ಯಕ್ಷ ನಂದೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಟೇಶ್, ಮಧುಶಂಕರ್, ಬಸವ ಕೇಂದ್ರದ ಗೌರವಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಯುವಘಟಕದ ಜಿಲ್ಲಾಧ್ಯಕ್ಷ ಮನು ಶ್ಯಾನುಭೋಗ್, ತಾಲೂಕು ಅಧ್ಯಕ್ಷ ಬಸವಣ್ಣ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಅಲಂಕೃತ ಎತ್ತಿನ ಗಾಡಿಗಳು, ನಂದಿಧ್ವಜ, ವೀರಗಾಸೆ, ಗೊರವರ ಕುಣಿತ, ಜನಪದ ಕಲಾತಂಡಗಳ ಜತೆಗೆ ಡಿಜೆಯ ಅಬ್ಬರದ ಸಂಗೀತದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ವೀರಶೈವ ಸಂಘಟನೆಯ ಯುವಕರು ಹಾಗೂ ಮುಖಂಡರು ಸಂಗೀತಕ್ಕೆ ತಕ್ಕಂತೆ ಹೆಜ್ಜೆಹಾಕಿದರು. ಮಡಹಳ್ಳಿ ವೃತ್ತ, ಬಸವೇಶ್ವರ ವೃತ್ತ, ಹಳೇ ಬಸ್ ನಿಲ್ದಾಣ, ಕಿತ್ತೂರು ರಾಣಿ ಚನ್ನಮ್ಮ ರಸ್ತೆ, ಕೋಡಹಳ್ಳಿ ಸರ್ಕಲ್, ಚಾಮರಾಜನಗರ ಜೋಡಿ ರಸ್ತೆಯ ಮೂಲಕ ಮೆರವಣಿಗೆ ಸಾಗಿತು. ಸೋಮೇಶ್ವರ ವಿದ್ಯಾರ್ಥಿನಿಲಯದಲ್ಲಿ ಪ್ರಸಾದ ವಿನಿಯೋಗ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net