ರಸ್ತೆ ಮೇಲೆ ಹರಿಯುತ್ತಿರುವ ಯುಜಿಡಿ ನೀರು !

21-GPT-4
Published on

ಗುಂಡ್ಲುಪೇಟೆ: ಪಟ್ಟಣದ ಚಾಮರಾಜನಗರ ಜೋಡಿ ರಸ್ತೆಯಲ್ಲಿ ಯುಜಿಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವ ಪರಿಣಾಮ ಅಶುಚಿತ್ವ ನಿರ್ಮಾಣವಾಗಿದೆ.

ಯುಜಿಡಿಯಿಂದ ಹೊರಬರುವ ನೀರಿನಿಂದಾಗಿ ಸಮೀಪದ ಅಂಗಡಿ ಮುಂಗಟ್ಟುಗಳವರು, ಆಂಜನೇಯ ದೇವಾಲಯಕ್ಕೆ ಬರುವ ಭಕ್ತರು, ಕೆ.ಎಸ್.ನಾಗರತ್ನಮ್ಮ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದ್ದು, ಸಾರ್ವಜನಿಕರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮಳೆಬಿದ್ದ ನಂತರ ಬಹುತೇಕ ಯುಜಿಡಿಯಲ್ಲಿ ಕೆಸರು ತುಂಬಿಕೊಂಡಿ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದಂತಾಗಿದೆ. ಆದರೆ ಈ ಬಗ್ಗೆ ಪುರಸಭೆ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಯುಜಿಡಿಯಿಂದ ಕೊಳಚೆ ನೀರು ಹೊರಬರುತ್ತಿದೆ. ಜೋಡಿರಸ್ತೆಯ ಜೆಡಿಎಸ್ ಕಚೇರಿ ಎದುರು ಯುಜಿಡಿ ಚೇಂಬರ್ ಒಡೆದಿದ್ದು ಒಳಗಿಂದ ನೀರು ಉಕ್ಕಿ ಸುಮಾರು ಒಂದು ಫರ್ಲಾಂಗ್ ದೂರದವರೆಗೂ ಹರಿಯುತ್ತಿದೆ.

ಈ ಬಗ್ಗೆ ಪುರಸಭೆಗೆ ದೂರು ನೀಡಲಾಗಿ, ರಿಪೇರಿ ಮಾಡಲು ಹೋಗಿ ಪೈಪ್‌ಲೈನ್ ಅಗೆದು ಹಾಕಿದ್ದಾರೆ. ಇದರಿಂದ ಭಾರಿ ಪ್ರಮಾಣದ ಕೊಳಚೆನೀರು ಹೊರ ಬರುತ್ತಿದ್ದು, ರಸ್ತೆ ಬದಿಯಲ್ಲಿ ಮಡುಗಟ್ಟಿ ನಿಲ್ಲುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಉತ್ತರಿಸುತ್ತಿದ್ದಾರೆ. ಕೂಡಲೇ ಯುಜಿಡಿ ರಿಪೇರಿ ಕಾರ್ಯಕೈಗೊಳ್ಳದಿದ್ದರೆ ಪುರಸಭೆ ಎದುರು ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡ ಕಡಬೂರು ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಯುಜಿಡಿಯೊಳಗೆ ಮಣ್ಣು ತುಂಬಿಕೊಂಡಿದ್ದು, ಹಲವು ಕಡೆಗಳಲ್ಲಿ ಸಮಸ್ಯೆ ಎದುರಾಗಿದೆ. ಇವುಗಳನ್ನು ಕೂಡಲೇ ಸರಿಪಡಿಸಲಾಗುವುದು.ಗೋಪಿ ಪುರಸಭೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net