

ಗುಂಡ್ಲುಪೇಟೆ: ನಿತ್ಯ ಯೋಗಾಭ್ಯಾಸ ಮಾಡುವುದರಿಂದ ರಕ್ತಚಲನೆ ಸುಗಮವಾಗಿ ಆಗಲಿದ್ದು, ಲವಲವಿಕೆಯಿಂದ ಜೀವನ ನಡೆಸಬಹುದಾಗಿದೆ ಎಂದು ಮದ್ದಾನೇಶ್ವರ ಯೋಗ ಕೇಂದ್ರದ ಯೋಗಶಿಕ್ಷಕ ವೀರನಪುರ ಬಸವಣ್ಣ ಹೇಳಿದರು.
ಪಟ್ಟಣದ ಮದ್ದಾನೇಶ್ವರ ಮಹಾಮನೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಆಹಾರ ಪದಾರ್ಥಗಳು ಕಲಬೆರಕೆಯಾಗಿದ್ದು, ಇವುಗಳ ಸೇವನೆಯಿಂದ ದೈಹಿಕ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಯೋಗಾಭ್ಯಾಸದಿಂದ ದೇಹ, ಮನಸ್ಸು ಚಿತ್ತಶುದ್ಧವಾಗುತ್ತದೆ ಎಂದರು.
ಅಂತರಂಗ ಹಸನಾದರೆ ಬಾಹ್ಯ ಅಂಗಗಳು ಸಕ್ರಿಯವಾಗಲಿದೆ. ಹಾಗಾಗಿ ಯೋಗಾಭ್ಯಾಸ ಉತ್ತಮ ಆರೋಗ್ಯ ಅಗತ್ಯ. ಮಕ್ಕಳಿಗೆ ಬಾಲ್ಯದಿಂದಲೇ ಯೋಗಾಭ್ಯಾಸ ಮಾಡಿಸುವುದರಿಂದ ಅವರ ದೇಹ ಮತ್ತು ಮನಸ್ಸು ಸಕ್ರಿಯವಾಗುತ್ತದೆ. ಆದ್ದರಿಂದ ಎಲ್ಲ ವಯಸ್ಸಿನವರು ಯೋಗ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೂರ್ಯನಮಸ್ಕಾರ ಸೇರಿದಂತೆ ಉಸಿರಾಟದ ಅಭ್ಯಾಸಗಳಾದ ಪ್ರಾಣಾಯಾಮ, ಭಸ್ತಿಕಾ, ಭ್ರಮರಿ ಮುಂತಾದ ಆಸನಗಳನ್ನು ಪ್ರದರ್ಶಿಸಲಾಯಿತು. ಮದ್ದಾನೇಶ್ವರ ಯೋಗ ಕೇಂದ್ರದ ಯೋಗಶಿಕ್ಷಕರಾದ ಕೆ.ಸಿ.ರಾಜಪ್ಪ, ನಾಗೇಶ್, ಅಧ್ಯಕ್ಷ ಕೆ.ವಿ.ಶ್ರೀನಿವಾಸ್, ಕೆ.ಎಸ್.ರಾಜಶೇಖರಪ್ಪ, ಗಿರೀಶ್, ಸಿದ್ದರಾಜು ಇದ್ದರು.