ಪಾಳುಬಿದ್ದ ಸಾಂಸ್ಕೃತಿಕ ಭವನ

11-GPT-1
Published on

ಗುಂಡ್ಲುಪೇಟೆ: ತಾಲೂಕಿನ ಅಣ್ಣೂರು ಕೇರಿಯಲ್ಲಿ ಗ್ರಾಮದ ಸಮುದಾಯ ಚಟುವಟಿಕೆಗಳು ಹಾಗೂ ಬಡಜನರು ಶುಭಕಾರ್ಯಗಳನ್ನು ನಡೆಸಲು ನಿರ್ಮಿಸಲಾಗಿದ್ದ ಸಾಂಸ್ಕೃತಿಕ ಭವನ ಅಕ್ಷರಶಃ ಪಾಳುಬೀಳುತ್ತಿದ್ದರೂ ಸಂಬಂಧಪಟ್ಟವರು ಇದರ ದುರಸ್ತಿಗೆ ಮುಂದಾಗದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಣ್ಣೂರು ಗ್ರಾಮ ಪಂಚಾಯಿತಿ ಕೇಂದ್ರವೂ ಆಗಿದ್ದು, ಗ್ರಾಮದಲ್ಲಿ 5,800ಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು 1,215 ಕುಟುಂಬಗಳಿವೆ. ಹಿಂದುಳಿದ ಉಪ್ಪಾರ ಜನಾಂಗದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಸಮುದಾಯಗಳು ತಮ್ಮ ಯಾವುದೇ ಚಟುವಟಿಕೆ, ಮದುವೆ ಇನ್ನಿತರ ಶುಭಕಾರ್ಯಗಳನ್ನು ನಡೆಸಲು ಸ್ಥಳಾವಕಾಶದ ಕೊರತೆ ಎದುರಾಗುತ್ತಿತ್ತು. ಅಲ್ಲದೆ, ಗ್ರಾಮದಲ್ಲಿ ಹೆಚ್ಚಿನವರು ಬಡವರೇ ಆಗಿರುವುದರಿಂದ ಖಾಸಗಿ ಕಲ್ಯಾಣ ಮಂಟಪಗಳಲ್ಲಿ ದುಬಾರಿ ಬಾಡಿಗೆ ನೀಡಲು ಅಶಕ್ತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತುಂಬ ಹಿಂದುಳಿದ ಗ್ರಾಮದ ಜನರ ಅಭಿವೃದ್ಧಿಗಾಗಿ ಅಂದು ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಗ್ರಾಮಕ್ಕೆ ಸುಸಜ್ಜಿತ ಸಾಂಸ್ಕೃತಿಕ ಭವನ ನಿರ್ಮಿಸಿಕೊಟ್ಟಿದ್ದರು. ಅಲ್ಲದೆ, ಇದಕ್ಕೆ ಹೊಂದಿಕೊಂಡಂತೆ ಜಿಲ್ಲಾ ಪಂಚಾಯಿತಿಯ ಅನುದಾನದಲ್ಲಿ ಸುವರ್ಣ ಗ್ರಾಮೋದಯ 3ನೇ ಹಂತದ ಯೋಜನೆಯಲ್ಲಿ ಸಮುದಾಯಗಳ ಚಟಿವಟಿಕೆಗಳಿಗೆ ಅನುಕೂಲವಾಗುವಂತೆ ಸಮುದಾಯ ಭವನವನ್ನೂ ನಿರ್ಮಿಸಿ, ತಾವೇ ಉದ್ಘಾಟನೆಯನ್ನೂ ನೆರವೇರಿಸಿದ್ದರು.

ಆರಂಭದಲ್ಲಿ ಸಾಂಸ್ಕೃತಿಕ ಭವನ ಹಾಗೂ ಸಮುದಾಯ ಭವನಗಳಲ್ಲಿ ಸಣ್ಣಪುಟ್ಟ ಶುಭಕಾರ್ಯಗಳು, ಗ್ರಾಮಸ್ಥರು ಒಟ್ಟಾಗಿ ಆಚರಿಸುವ ಕಾರ್ಯಕ್ರಮಗಳು, ಹಬ್ಬ, ಜಾತ್ರೆ ಆಚರಣೆಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಲಾಗುತ್ತಿತ್ತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಹಿಳೆಯರು ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಹೈನುಗಾರಿಕೆ ಮುಂತಾದ ತರಬೇತಿಗಳನ್ನು ಇದೇ ಭವನಗಳಲ್ಲಿ ನೀಡಲಾಗುತ್ತಿತ್ತು. ಶಾಲೆಯ ಆವರಣದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲು ಇದೇ ಭವನಗಳು ಉಪಯೋಗಕ್ಕೆ ಬರುತ್ತಿದ್ದವು.

ಆದರೆ ಈ ಭವನ ನಿರ್ಮಾಣ ಸಂದರ್ಭದಲ್ಲಿ ಕಳಪೆ ಪದಾರ್ಥಗಳನ್ನು ಬಳಕೆ ಮಾಡಿದ್ದರಿಂದ ಕಿಟಕಿ ಬಾಗಿಲುಗಳಿಗೆ ಗೆದ್ದಿಲು ಹತ್ತಿವೆ. ಅಲ್ಲದೆ, ಭವನದ ನಿರ್ವಹಣೆಯನ್ನೂ ಕೈಬಿಟ್ಟಿದ್ದರಿಂದ ಸುತ್ತಲೂ ಗಿಡಗಂಟಿಗಳು ದೊಡ್ಡದಾಗಿ ಬೆಳೆದು ಕಟ್ಟಡವನ್ನು ಆವರಿಸಿಕೊಂಡಿವೆ. ಭವನಗಳ ವಿದ್ಯುತ್ ಬಿಲ್ ಕಟ್ಟದ ಪರಿಣಾಮ ಸೆಸ್ಕ್ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಿದೆ. ಇದರಿಂದ ನಿರ್ಜನ ಪ್ರದೇಶದಲ್ಲಿರುವ ಭವನಗಳು ಕುಡುಕರ ಅಡ್ಡೆಯಾಗಿ ಪರಿವರ್ತನೆಯಾಗಿವೆ. ಜೂಜಾಟ ಮುಂತಾದ ಅನೈತಿಕ ಚಟುವಟಿಕೆಗಳಿಗೆ ಪ್ರಶಸ್ತವಾದ ತಾಣವಾಗಿವೆ. ಇವುಗಳಲ್ಲಿ ಯಾವುದೇ ಚಟುವಟಿಕೆಗಳೂ ನಡೆಯದೆ ಮುಂಬಾಗಿಲು ಸೇರಿದಂತೆ ಕೊಠಡಿಗಳ ಎಲ್ಲ ಬಾಗಿಲುಗಳು ಗೆದ್ದಿಲು ಹಿಡಿದು ಮುರಿದು ಪಾಳುಬೀಳುತ್ತಿವೆ.

ಈ ಭವನಗಳಲ್ಲಿ ಯುವಕ ಸಂಘ ಹಾಗೂ ಸ್ವಸಹಾಯ ಸಂಘಗಳ ಸಭೆ, ಸಮಾರಂಭಗಳನ್ನು ನಡೆಸಲಾಗುತ್ತಿತ್ತು. ಆದರೆ ಮೂಲ ಸೌಕರ್ಯಗಳಾದ ನೀರು, ವಿದ್ಯುತ್ ಹಾಗೂ ನಿರ್ವಹಣೆಯನ್ನು ಸರಿಯಾಗಿ ಮಾಡದ ಪರಿಣಾಮ ಪಾಳು ಬೀಳುತ್ತಿವೆ. ಸರ್ಕಾರದ ಕೋಟ್ಯಂತರ ರೂ. ವ್ಯರ್ಥವಾಗುತ್ತಿದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಇದನ್ನು ಸರಿಪಡಿಸಿ ಮತ್ತೆ ಬಳಕೆಗೆ ತರಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭವನಗಳ ಬಾಗಿಲುಗಳನ್ನು ಹೊಸದಾಗಿ ನಿರ್ಮಿಸಲು ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಲು ಪಂಚಾಯಿತಿಯಲ್ಲಿ ಅನುದಾನ ಮೀಸಲಾಗಿರಿಸಲಾಗಿದ್ದು, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿತ್ತು. ಸದ್ಯದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.-ಶಿಲ್ಪಾ ಅಣ್ಣೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭವನಗಳು ಪಾಳುಬೀಳುತ್ತಿರುವ ಬಗ್ಗೆ ಈಗಷ್ಟೇ ವಿಷಯ ತಿಳಿದುಬಂದಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು.-ಎಚ್.ಎಂ.ಗಣೇಶ್ ಪ್ರಸಾದ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net