

ಗುಂಡ್ಲುಪೇಟೆ: ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ನಂದಿನಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಲು ಒಕ್ಕೂಟ ಪಟ್ಟಣದಲ್ಲಿ ಕೆಫೆ ಆರಂಭಿಸಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಪಟ್ಟಣದಲ್ಲಿ ಚಾಮುಲ್ ವತಿಯಿಂದ ಆರಂಭಿಸಿರುವ ಕೆಫೆಮೂ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಚಾಮರಾ ಜನಗರ ಜಿಲ್ಲಾ ಹಾಲು ಒಕ್ಕೂಟ ಹಾಗೂ ಕರ್ನಾಟಕ ಮಿಲ್ಕ್ ಫೆಡರೇಷನ್ ವತಿಯಿಂದ ಗುಂಡ್ಲುಪೇಟೆ ಪಟ್ಟಣದಲ್ಲಿ ನಂದಿನಿ ಕೆಫೆ ಸ್ಥಾಪಿತವಾಗಿದೆ. ಉತ್ತಮ ದರ್ಜೆಯ ಹಾಲಿನ ಉತ್ಪನ್ನ ಹಾಗೂ ತಿಂಡಿ- ತಿನಿಸುಗಳು ಇಲ್ಲಿ ದೊರೆಯಲಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಇಂತಹ ಕೆಫೆ ತೆರೆಯಲು ಉದ್ದೇಶಿಸಲಾಗಿದೆ ಎಂದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಸಂಸದ ಸುನೀಲ್ ಬೋಸ್, ರಾಜ್ಯ ಹಾಲು ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್, ಚಾಮುಲ್ ಅಧ್ಯಕ್ಷ ನಾಗೇಂದ್ರ, ನಿರ್ದೇಶಕ ನಂಜುಂಡಪ್ರಸಾದ್, ಡಾ.ಚಂದ್ರಚೂಡ ಸೇರಿದಂತೆ ಹಲವರು ಇದ್ದರು.