ಕೇರಳಕ್ಕೆ ಸಾಗಿಸುತ್ತಿದ್ದ 37 ಲಕ್ಷ ರೂ. ವಶ

17-GPT-3
Published on

ಗುಂಡ್ಲುಪೇಟೆ: ದಾಖಲೆಯಿಲ್ಲದೆ ಕೇರಳಕ್ಕೆ ಸಾಗಿಸುತ್ತಿದ್ದ 37 ಲಕ್ಷ ರೂ.ಗಳನ್ನು ಪಟ್ಟಣದ ಪೊಲೀಸರು ಭಾನುವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಸಂಜೆ 6.30ರಲ್ಲಿ ಮದ್ದೂರು ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಸತೀಶ್ ಮಾರಿಗೊಂಡ ಅವರು ಕಾರನ್ನು ಪರಿಶೀಲಿಸಿದಾಗ ಕಾರು ಮಾಲೀಕ ರಾಹುಲ್ ತನ್ನ ಸ್ನೇಹಿತ ಸಾಲ್ವಿನ್ ಜತೆಗೂಡಿ ಹಣವನ್ನು ಬೆಂಗಳೂರಿನಿಂದ ಕೇರಳಕ್ಕೆ ಸಾಗಣೆ ಮಾಡುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ವಿಷಯ ತಿಳಿದ ಪಟ್ಟಣ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಸಾಹೇಬಗೌಡ ಮತ್ತು ಹೊನ್ನರಾಜ್, ಸಿಬ್ಬಂದಿ ಶಶಿಧರಮೂರ್ತಿ, ಪ್ರಭುಸ್ವಾಮಿ, ಬಂಟಪ್ಪ ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದಾಗ ಕಾರಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಣೆ ಮಾಡುತ್ತಿದ್ದ 37 ಲಕ್ಷ ರೂ. ಪತ್ತೆಯಾಯಿತು. ಸೋಮವಾರ ಸಂಜೆಯವರೆಗೂ ಸಂಬಂಧಪಟ್ಟವರು ಸಮರ್ಪಕ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದರಿಂದ ಇದು ಹವಾಲಾ ಹಣವಾಗಿರಬಹುದು ಎಂಬ ಶಂಕೆಯಿಂದ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಣ ಮತ್ತು ಕಾರನ್ನು ವಶಕ್ಕೆ ಪಡೆದುಕೊಂಡು ರಾಹುಲ್ ಹಾಗೂ ಸಾಲ್ವಿನ್ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹಣಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net