ಹಾಡುಹಗಲೇ ತೊಂಬೆ ನೀರಿಗೆ ಕನ್ನ

14-GPT-1
Published on

ಗುಂಡ್ಲುಪೇಟೆ ; ಅಂತ್ಯಸಂಸ್ಕಾರಕ್ಕೆ ಹೋಗಿ ಬರುವವರ ಅನುಕೂಲಕ್ಕಾಗಿ ನಿರ್ಮಿಸಿದ ತೊಂಬೆ ನೀರು ಕದ್ದು ಪಟ್ಟಣದ ನಿವಾಸಿಗಳಿಗೆ ಮಾರಾಟ ಮಾಡುವ ಜಾಲ ಸಕ್ರಿಯವಾಗಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದಿಂದ ಚಾಮರಾಜನಗರ ರಸ್ತೆಯಲ್ಲಿ ಬರುವ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮುಗಿಸಿ ಬರುವವರು ಕೈಕಾಲು ತೊಳೆದುಕೊಳ್ಳಲು ಅನುಕೂಲವಾಗುವಂತೆ ಪುರಸಭೆಯು ಕಲ್ಯಾಣಿಕೊಳದ ವೇದಾಂಜನೇಯ ದೇವಸ್ಥಾನದ ಪಕ್ಕದಲ್ಲಿ ಬೋರ್‌ವೆಲ್ ಕೊರೆಸಿ ತೊಂಬೆ ನಿರ್ಮಿಸಿ ನೀರು ತುಂಬಿಸುತ್ತಿದೆ. ಆದರೆ, ಇಲ್ಲಿಂದ ನಿತ್ಯ ಮೂರರಿಂದ ನಾಲ್ಕು ಟ್ಯಾಂಕರ್ ನೀರು ತುಂಬಿಸಿಕೊಂಡು ಪಟ್ಟಣದ ನಿವಾಸಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಂತ್ಯಸಂಸ್ಕಾರ ಮುಗಿಸಿ ಬಂದವರಿಗೂ ಕೈಕಾಲು ತೊಳೆಯಲು ಜಾಗ ನೀಡದೆ ಒಂದರ ಹಿಂದೆ ಒಂದರಂತೆ ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.

ಜನವಸತಿ ಪ್ರದೇಶಗಳು ಹೆಚ್ಚಾಗುತ್ತಿದ್ದರೂ ಹಳೆಯ ಬಡಾವಣೆಗಳು ಸೇರಿದಂತೆ ಹಲವು ಬಡಾವಣೆಗಳಿಗೆ ಇನ್ನೂ ನೀರಿನ ಬವಣೆ ತಪ್ಪಿಲ್ಲ. ಕಬಿನಿ ನೀರಿನ ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಯವಾದರೂ ಪ್ರಮುಖ ಬಡಾವಣೆಗಳಲ್ಲಿಯೇ ನೀರಿನ ಸಮಸ್ಯೆ ತೀವ್ರವಾಗುತ್ತದೆ. ಎಷ್ಟೋ ಬಡಾವಣೆಗಳಿಗೆ ವಾರಕ್ಕೊಮ್ಮೆಯೂ ನೀರು ಸರಬರಾಜು ಮಾಡುತ್ತಿಲ್ಲ.

ಇಲ್ಲಿನ ನೀರಿನ ನಿರ್ವಹಣೆ ಹೊಣೆ ಹೊತ್ತಿರುವ ಪುರಸಭೆ ಅಧಿಕಾರಿಗಳು ಗೊತ್ತು ಗೊತ್ತಾಗದಂತೆ ವರ್ತಿಸುತ್ತಿರುವುದು ನಾಗರಿಕರಲ್ಲಿ ಬೇಸರ ತಂದಿದೆ. ಉತ್ತಮ ಉದ್ದೇಶದಿಂದ ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಿರುವ ತೊಂಬೆಯ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ. ಇದನ್ನು ಕೇಳಬೇಕಾದ ಪುರಸಭೆ ಅಧಿಕಾರಿಗಳೇ ನೀರುಗಳ್ಳರಿಗೆ ಕುಮ್ಮಕ್ಕು ನೀಡುತ್ತಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಪ್ರತಿ ಟ್ಯಾಂಕ್ ನೀರಿಗೆ 600 ರೂ. ಕೊಟ್ಟು ಖರೀದಿಸುವುದು ಅನಿವಾರ್ಯವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಟ್ಯಾಂಕರ್ ಲಾಬಿ:
ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಕೊಳವೆಬಾವಿಗಳಿದ್ದರೂ ಸಮರ್ಪಕ ನೀರು ಸರಬರಾಜು ಮಾಡುತ್ತಿಲ್ಲ. ಕಬಿನಿಯಿಂದಲೇ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದರೂ ಆಗಾಗ್ಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಪಟ್ಟಣದ ನಿವಾಸಿಗಳು ಹಣ ಕೊಟ್ಟು ನೀರು ಖರೀದಿಸುವುದು ಅನಿವಾರ್ಯವಾಗುತ್ತಿದೆ. ಇದರಿಂದ ಟ್ಯಾಂಕರ್‌ಗಳಿಗೆ ತುಂಬಾ ಬೇಡಿಕೆಯುಂಟಾಗಿದ್ದು ಕೆಲವು ಟ್ಯಾಂಕರ್ ಮಾಲೀಕರು ತಮ್ಮದೇ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಿದರೆ ಇನ್ನು ಕೆಲವರು ಪುರಸಭೆಯ ಕೊಳವೆಬಾವಿಗಳು, ಹೌಸಿಂಗ್ ಬೋರ್ಡ್ ಟ್ಯಾಂಕ್ ನೀರು ಕದ್ದು ಮಾರಿಕೊಳ್ಳುವ ಮೂಲಕ ಹಾಡಹಗಲೇ ದಂಧೆ ನಡೆಸುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಪುರಸಭೆಯ ಕೊಳವೆ ಬಾವಿ ಹಾಗೂ ತೊಂಬೆಗಳಲ್ಲಿ ನೀರು ಬಸಿದು ಮಾರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಪಟ್ಟಣದ ಎಲ್ಲ ಬಡಾವಣೆಗಳಿಗೂ ಸಮರ್ಪಕ ಕುಡಿಯುವ ನೀರು ಸರಬರಾಜಿಗೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಲ್ಯಾಣಿ ಕೊಳದ ಸಮೀಪ ತೊಂಬೆಯಲ್ಲಿ ಟ್ಯಾಂಕರ್‌ಗಳಿಗೆ ನೀರು ತುಂಬಿಸಿಕೊಂಡು ಹೋಗುತ್ತಿರುವವರ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಪರಿಶೀಲಿಸಿ ಅಂತಹ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net