

ಗುಂಡ್ಲುಪೇಟೆ: ಈ ಬಾರಿ ಅಧಿಕ ಗಾಳಿ ಮಳೆಯಿಂದ ಬೆಳೆಹಾನಿಯಾದ ರೈತರಿಗೆ ಸರ್ಕಾರದಿಂದ ನೀಡಬೇಕಾದ ಪರಿಹಾರ ಕೈಸೇರದೆ ಕಂಗಾಲಾಗಿದ್ದಾರೆ.
ಎರಡು ತಿಂಗಳ ಹಿಂದೆ ಮಳೆಗಾಳಿಯಿಂದಾದ ಬೆಳೆ ನಷ್ಟಕ್ಕೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬೇಕಾದ ಪರಿಹಾರ ಪೋರ್ಟಲ್ ಇನ್ನೂ ತೆರೆಯದ ಪರಿಣಾಮ ಬೆಳೆ ನಷ್ಟವಾಗಿರುವ ರೈತರ ಅರ್ಜಿಗಳು ಇನ್ನೂ ಬಾಕಿ ಉಳಿದಿದ್ದು, ನೈಸರ್ಗಿಕ ವಿಪತ್ತು ನಿರ್ವಹಣೆಯಡಿ ಸರ್ಕಾರದಿಂದ ದೊರಕುವ ಪರಿಹಾರ ಕೈಸೇರದಂತಾಗಿದೆ.
ತಾಲೂಕಿಗೆ ಯಾವುದೇ ನೀರಾವರಿ ಮೂಲಗಳು ಇಲ್ಲದ ಪರಿಣಾಮ ಕಳೆದ ವರ್ಷ ಭೀಕರ ಬರದಿಂದ ಮಳೆಯಾಶ್ರಿತ ಬೆಳೆಗಳು ಸಂಪೂರ್ಣ ನಾಶವಾಗಿತ್ತು. ತಾಲೂಕಿನ ಪ್ರಮುಖ ಬೆಳೆಗಳಾದ ಸೂರ್ಯಕಾಂತಿ, ಜೋಳ, ಮುಸುಕಿನಜೋಳ, ಹತ್ತಿ, ನೆಲಗಡಲೆ, ಅಲಸಂದೆ, ಉದ್ದು, ಹೆಸರು ಮುಂತಾದ ಎಲ್ಲ ಬೆಳೆಗಳೂ ನಾಶವಾಗಿದ್ದವು. ನದಿಮೂಲದಿಂದ ಕೆರೆಗಳಿಗೆ ನೀರು ತುಂಬಿಸದ ಪರಿಣಾಮ ಅಂತರ್ಜಲ ಮಟ್ಟದಲ್ಲಿ ತೀವ್ರ ಕುಸಿತವುಂಟಾಗಿತ್ತು. ಇದರಿಂದ ಜನಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗೆ ತುಂಬ ಅಭಾವವುಂಟಾಗಿತ್ತು.
ವಿಳಂಬವಾದರೂ ಕೈಸೇರಿದ ಬರ ಪರಿಹಾರ:
ಶೇ.33 ರಷ್ಟು ಬೆಳೆಗಳು ನಾಶವಾದರೆ ಬರಪೀಡಿತ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಗುಂಡ್ಲುಪೇಟೆ ತಾಲೂಕು ಶೇ.100 ರಷ್ಟು ಬೆಳೆನಷ್ಟಕ್ಕೊಳಗಾಗಿರುವ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಪೈಕಿ ಖುಷ್ಕಿ ಜಮೀನುಗಳಲ್ಲಿ ಬೆಳೆದಿದ್ದ 39 ಸಾವಿರ ರೈತರು ಬರದಿಂದ ಬೆಳೆ ನಷ್ಟಕ್ಕೊಳಗಾಗಿದ್ದರು. ಮಳೆಯಾಶ್ರಿತ ಭೂಮಿಗೆ ಪ್ರತಿ ಎಕರೆಗೆ 3400 ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೂ, ಕೆಲವು ತಾಂತ್ರಿಕ ಕಾರಣಗಳಿಂದ ಇನ್ನೂ ಹೆಚ್ಚಿನ ರೈತರ ಖಾತೆಗಳಿಗೆ ಜಮೆಯಾಗಿಲ್ಲ.
ಈ ಬಾರಿ ಸ್ವಲ್ಪ ವಿಳಂಬವಾದರೂ ಉತ್ತಮವಾಗಿ ಮಳೆ ಬಿದ್ದರೂ ಗಾಳಿ ಮಳೆಯಿಂದ ಬಾಳೆ, ಪಪ್ಪಾಯಿ, ತೆಂಗು ಮುಂತಾದ ತೋಟಗಾರಿಕೆ ಬೆಳೆಗಳು ಭಾರಿ ಪ್ರಮಾಣದಲ್ಲಿ ನೆಲಕಚ್ಚಿವೆ. ಅದರಲ್ಲಿಯೂ ಕಟಾವಿನ ಹಂತಕ್ಕೆ ಬಂದಿದ್ದ ಬಾಳೆ ನೆಲಕಚ್ಚಿದ್ದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಸಾಲ ಸೋಲ ಮಾಡಿ ಬಾಳೆ ಬೆಳೆದಿದ್ದ ಬೆಳೆಗಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಬಿತ್ತನೆ ಮಾಡಿದ್ದ ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ ಜೋರಾಗಿ ಬಿದ್ದ ಮಳೆನೀರಿಗೆ ಕೊಚ್ಚಿಕೊಂಡು ಹೋಗಿವೆ. ಹಂಗಳ ಹೋಬಳಿಯ ಹೆಚ್ಚಿನ ಗ್ರಾಮಗಳು, ಕಾಡಂಚಿನ ಬರಗಿ. ದೇಶೀಪುರ, ಆಲತ್ತೂರು, ಮಲ್ಲಯ್ಯನಪುರ, ವೀರನಪುರ, ಪಂಜನಹಳ್ಳಿ, ಮಾಡ್ರಹಳ್ಳಿ ಮುಂತಾದ ಗ್ರಾಮಗಳಲ್ಲಿ ತಲಾ 50 ಸಾವಿರಕ್ಕೂ ಹೆಚ್ಚಿನ ಬಾಳೆ ಗಿಡಗಳು ನೆಲಕಚ್ಚಿವೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಕಾರ್ಮಿಕರ ಕೂಲಿ ಮುಂತಾದ ಕಾರಣಗಳಿಂದ ಬಾಳೆ ಬೆಳೆಯಲು ಪ್ರತಿ ಎಕರೆಗೆ ಒಂದು ಲಕ್ಷ ರೂ. ವೆಚ್ಚವಾಗುತ್ತಿದೆ.
ಇನ್ನೂ ತೆರೆಯದ ಪರಿಹಾರ ಪೋರ್ಟಲ್, ಕೈಸೇರದ ಪರಿಹಾರ:
ಈ ಬಗ್ಗೆ ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳು ಬೆಳೆನಾಶವಾದ ಜಮೀನುಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿವೆ. ಇಷ್ಟಾದರೂ ಬೆಳೆ ನಾಶದ ಬಗ್ಗೆ ಜಿಲ್ಲಾಧಿಕಾರಿಗೆ ತಂತ್ರಾಂಶದ ಮೂಲಕ ದಾಖಲಿಸಬೇಕಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ಲಾಗಿನ್‌ನಲ್ಲಿ ಕೆಲಸ ಮಾಡುವ ಪರಿಹಾರ ಸಾಫ್ಟ್‌ವೇರ್ ಪೋರ್ಟಲ್ ಇನ್ನೂ ತೆರೆಯದ ಪರಿಣಾಮ ಅರ್ಜಿಗಳಿಗೆ ಪರಿಹಾರ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಹಾನಿಗೆ ಖುಷ್ಕಿ ಹಾಗೂ ನೀರಾವರಿ ಸೇರಿದಂತೆ ಎಲ್ಲ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಿದ್ದು, ತಾಂತ್ರಿಕ ಸಮಸ್ಯೆಗಳಿರುವ ಒಂದು ಸಾವಿರಕ್ಕೂ ಹೆಚ್ಚಿನ ರೈತರ ಖಾತೆಗಳಿಗೆ ಇನ್ನೂ ಜಮೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಮಳೆ ಬೀಳದೆ ನಷ್ಟಕ್ಕೊಳಗಾದ ರೈತರು ಈ ಬಾರಿ ಸಾಲಸೋಲ ಮಾಡಿ ಲಕ್ಷಾಂತರ ರೂ. ವೆಚ್ಚದಲ್ಲಿ ಬೆಳೆ ನಾಟಿ ಮಾಡಿದ್ದರು. ಆದರೆ, ಇದೂ ಕೂಡ ಅಧಿಕ ಮಳೆಯಿಂದಾಗಿ ಬೆಳೆ ನಾಶವಾಗಿದೆ. ಬಾಳೆ, ಅರಿಶಿನ, ಬೆಳ್ಳುಳ್ಳಿ ಬೆಳೆಯಲು ರೈತರಿಗೆ ಎಕರೆಗೆ ಕನಿಷ್ಠ ಒಂದು ಲಕ್ಷ ರೂ. ವೆಚ್ಚವಾಗುತ್ತಿದೆ. ಆದರೆ, ಸರ್ಕಾರ ಹಳೆಯ ಮಾನದಂಡದ ಅಧಾರದ ಮೇಲೆ ಪುಡಿಗಾಸಿನ ಪರಿಹಾರ ನೀಡುತ್ತಿದ್ದು ಇದು ಕಾರ್ಮಿಕರ ಕೂಲಿಗೂ ಸಾಲುತ್ತಿಲ್ಲ. ಆದ್ದರಿಂದ ವೈಜ್ಞಾನಿಕ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು.
/ಹಂಗಳ ಮಾಧು, ರೈತ ಸಂಘದ ಜಿಲ್ಲಾಧ್ಯಕ್ಷರು.
ಬೆಳೆ ಹಾನಿ ಸಂಬಂಧ 1195 ಸಂತ್ರಸ್ತ ರೈತರಿಂದ ಅರ್ಜಿ ಪಡೆಯಲಾಗಿದ್ದು, 1646 ಎಕರೆ ಬಾಳೆ, 15 ಹೆಕ್ಟೇರ್ ತರಕಾರಿ, ಬೀಟ್ ರೂಟ್, ಈರುಳ್ಳಿ ಮುಂತಾದ ಬೆಳೆಗಳು ನಾಶವಾಗಿವೆ. ನೈಸರ್ಗಿಕ ವಿಪತ್ತು ಪರಿಹಾರ ನಿಧಿಯಲ್ಲಿ ಈಗಾಗಲೇ ಸರ್ಕಾರ ನಿಗದಿ ಮಾಡಿರುವಂತೆ ಬೆಳೆ ಹಾನಿಯಾಗಿರುವ ರೈತರಿಗೆ ಪ್ರತಿ ಎಕರೆಗೆ 6,800 ರೂ.ನಂತೆ ಪರಿಹಾರ ನೀಡಲಾಗುವುದು.
/ಭಾಸ್ಕರ್, ಹಿರಿಯ ಸಹಾಯಕ ನಿರ್ದೇಶಕರು. ತೋಟಗಾರಿಕೆ ಇಲಾಖೆ, ಗುಂಡ್ಲುಪೇಟೆ.