ಗುಂಡ್ಲುಪೇಟೆ: ತಾಲೂಕಿನ ಚನ್ನಮಲ್ಲೀಪುರ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಕಾಡು ಹಂದಿ ಮಾಂಸ ಬೇಯಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕೇರಳದ ವೈನಾಡು ಜಿಲ್ಲೆಯ ಅಚ್ಚುರಾನ್ ಗ್ರಾಮದ ಎಂ.ವಿ.ಥಾಮಸ್, ಇಡುಕ್ಕಿ ಜಿಲ್ಲೆಯ ಒಟ್ಟಿಕ್ಕಲ್‌ನ ಶಿಜು ಜಾಕೋಬ್ ಬಂಧಿತ ಆರೋಪಿಗಳು. ಬಂಡೀಪುರ ಹುಲಿ ಯೋಜನೆಯ ಮದ್ದೂರು ವಲಯದ ಕಾಡಂಚಿನ ಗ್ರಾಮದ ಜಾಕೋಬ್ ಫಾರ್ಮ್‌ಹೌಸ್‌ನಲ್ಲಿ ಹಂದಿ ಮಾಂಸ ಬೇಯಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಭಾನುವಾರ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಚನ್ನಮಲ್ಲೀಪುರ ಗ್ರಾಮದ ಬಸಪ್ಪ ಎಂಬುವರ ಜಮೀನಿನಲ್ಲಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಕಾಡು ಹಂದಿ ಮೃತಪಟ್ಟಿತ್ತು. ಜಮೀನಿನ ಮಾಲೀಕ ನಮಗೆ ಕಾಡು ಹಂದಿಯನ್ನು ನೀಡಿದ್ದರು ಎಂದು ತಿಳಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ, ಭಾರತೀಯ ವಿದ್ಯುತ್ ಕಾಯಿದೆಯಡಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರ ಆದೇಶದ ಮೇರೆಗೆ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತಲೆಮರೆಸಿಕೊಂಡಿರುವ ಜಮೀನು ಮಾಲೀಕನ ಬಂಧನಕ್ಕೆ ಕ್ರಮಕೈಗೊಂಡಿರುವುದಾಗಿ ಗುಂಡ್ಲುಪೇಟೆ ಉಪ ವಿಭಾಗದ ಎಸಿಎಫ್ ಜಿ. ರವೀಂದ್ರ ತಿಳಿಸಿದ್ದಾರೆ.