ವನ್ಯಜೀವಿಗಳಿಗೆ ಕಾರು ಡಿಕ್ಕಿ

IMG-20240608-WA0191
Published on

ಗುಂಡ್ಲುಪೇಟೆ: ಬಂಡೀಪುರ ಅರಣ್ಯದ ಕೇರಳ ರಸ್ತೆಯಲ್ಲಿ ಕಾರು ಡಿಕ್ಕಿಹೊಡೆದು ಜಿಂಕೆ ಹಾಗೂ ಸೀಳು ನಾಯಿಗಳ ಸಾವಿಗೆ ಕಾರಣನಾದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಗುಂಡ್ಲುಪೇಟೆ ಉಪ ವಿಭಾಗ, ಮದ್ದೂರು ವಲಯದ ಸುಲ್ತಾನ್ ಭತ್ತೇರಿ ರಾಷ್ಟ್ರೀಯ ಹೆದ್ದಾರಿಯ ಮೊದಲನೇ ಚೈನ್‌ಗೇಟ್ ಬಳಿ ಶುಕ್ರವಾರ ಸಂಜೆ 7 ಗಂಟೆ ಸುಮಾರು ಕೇರಳದ ಕಡೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ 5 ವರ್ಷದ ಒಂದು ಗಂಡು ಕಾಡು ನಾಯಿ (ಡೋಲ್) ಹಾಗೂ 3 ವರ್ಷದ ಒಂದು ಗಂಡು ಜಿಂಕೆ ಮೃತಪಟ್ಟಿತ್ತು. ವಿಷಯ ತಿಳಿದ ಕೂಡಲೇ ಕಾರನ್ನು ಬೆನ್ನಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ ಅಪಘಾತ ನಡೆಸಿದ ಸುಲ್ತಾನ್ ಭತ್ತೇರಿ ನಿವಾಸಿ ಚಾಲಕ ಸೈಪ್ಟನ್ ಸನ್ನಿಯನ್ನು ವಶಕ್ಕೆ ಪಡೆದರು.

ಬಂಡೀಪುರ ಹುಲಿಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾರ್ಗದರ್ಶನದಂತೆ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ. ರವೀಂದ್ರ ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಮೃತ ವನ್ಯಜೀವಿಗಳ ಕಳೆಬರಗಳನ್ನು ಶನಿವಾರ ಇಲಾಖೆ ಪಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಅರಣ್ಯ ಪ್ರದೇಶದಲ್ಲಿ ಪ್ರಕೃತಿಗೆ ಬಿಡಲಾಯಿತು.

ಈ ಸಂದರ್ಭದಲ್ಲಿ ಮದ್ದೂರು ವಲಯ ಅರಣ್ಯಾದಿಕಾರಿ ಬಿ.ಎಂ.ಮಲ್ಲೇಶ್, ಉಪವಲಯಾರಣ್ಯಾಧಿಕಾರಿ ರವಿಕುಮಾರ್ ಸಂಗೂರ, ವನಪಾಲಕರಾದ ಬಾಹುಬಲಿ, ಮಹಮ್ಮದ್ ನಡಾಫ್, ನವೀನ, ವಾಹನ ಚಾಲಕ ಜೀವನ್ ಮತ್ತು ಮನು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net