ಕೋಡಿಬೀಳುತ್ತಿವೆ ಕೆರೆಗಳು

IMG-20240523-WA0097
Published on

ಗುಂಡ್ಲುಪೇಟೆ: ಕಳೆದ ಹತ್ತಾರು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಗೆ ತಾಲೂಕಿನ ಹಂಗಳ ಹೋಬಳಿಯ ಕೆರೆಗಳು ಕೋಡಿಬೀಳುತ್ತಿವೆ.

ಬಂಡೀಪುರದ ಅರಣ್ಯ ಪ್ರದೇಶ ಹಾಗೂ ಗೋಪಾಲಸ್ವಾಮಿ ಬೆಟ್ಟಕ್ಕೆ ಭಾರಿ ಮಳೆ ಬೀಳುತ್ತಿದೆ. ಭೋರ್ಗರೆದು ಹರಿವ ಹಳ್ಳ-ಕೊಳ್ಳಗಳ ನೀರು ಬತ್ತಿಹೋಗಿರುವ ಕೆರೆಗಗಳನ್ನು ತುಂಬುತ್ತಿದೆ. ಇದರಿಂದಾಗಿ ಬೆಟ್ಟದ ತಪ್ಪಲಿನ ಕಟ್ಟೆ-ಹಳ್ಳ ಹಾಗೂ ಹಿರೀಕೆರೆಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಕಳೆದ 17 ವರ್ಷಗಳಿಂದ ನೀರು ಕಾಣದೆ ಬರಡಾಗಿದ್ದ ದೇವರಹಳ್ಳಿ ಕೆರೆಗೂ ನೀರು ಬರುತ್ತಿದ್ದು, ಈಗಾಗಲೇ ಅರ್ಧ ಭಾಗ ತುಂಬಿಕೊಂಡಿದೆ. ಹಂಗಳದ ದೊಡ್ಡಕೆರೆಯೂ ಅರ್ಧದಷ್ಟು ತುಂಬಿದ್ದು ಹೀಗೆ ಮಳೆ ಮುಂದುವರಿದರೆ ಕೋಡಿಬೀಳಲಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯಕ್ಕೆ ಉತ್ತಮ ಮಳೆಬೀಳುತ್ತಿರುವುದರಿಂದ ಬೇರಂಬಾಡಿ ಸಮೀಪದ ಕೆಂಪುಸಾಗರ ಕೆರೆ, ಗೋಪಾಲಪುರ, ಕಣ್ಣೇಗಾಲ ನಡುವಿನ ವಳಗಟ್ಟೆ, ಅಜ್ಜಿಕಟ್ಟೆ ತುಂಬಿ ಕೋಡಿಬಿದ್ದಿವೆ. ಈ ನೀರು ಮಲ್ಲಯ್ಯನಪುರ ಕೆರೆಯತ್ತ ಹರಿಯುತ್ತಿದೆ.

ಕೆರೆಗಳಿಂದ ಹೊರಬರುವ ನೀರು ನೋಡಲು ಅಕ್ಕಪಕ್ಕದ ಗ್ರಾಮಗಳ ಜನರು ಮುಗಿಬೀಳುತ್ತಿದ್ದಾರೆ. ತಮ್ಮ ಮೊಬೈಲ್‌ಗಳಲ್ಲಿ ಫೋಟೋ, ವಿಡಿಯೋ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಮಳೆಬಿದ್ದರೆ ಕೆರೆಯಂತಾಗುವ ಸಾರಿಗೆ ಬಸ್ ನಿಲ್ದಾಣ: ಪಟ್ಟಣದಲ್ಲಿ ಸ್ವಲ್ಪ ಮಳೆ ಬಿದ್ದರೂ ತಗ್ಗುಪ್ರದೇಶದಲ್ಲಿರುವ ಸಾರಿಗೆ ಬಸ್ ನಿಲ್ದಾಣದೊಳಗೆ ನೀರು ನುಗ್ಗುತ್ತಿದೆ. ಕೆಸರು ಮಿಶ್ರೀತ ನೀರು ಹೆಪ್ಪುಗಟ್ಟಿ ನಿಲ್ಲುವುದರಿಂದ ಇಡೀ ನಿಲ್ದಾಣ ಕೆರೆಯಂತಾಗುತ್ತಿದೆ. ಇದರಿಂದಾಗಿ ಬಸ್ ನಿಲ್ದಾಣದ ಒಳಗೆ ಪ್ರವೇಶಿಸಲು ಪ್ರಯಾಣಿಕರು ಪರದಾಡುವಂತಾಗುತ್ತಿದೆ. ಬುಧವಾರ ರಾತ್ರಿಯಿಡೀ ಸುರಿದ ಮಳೆ ನೀರಿನಿಂದ ಕೆಸರುಮಯವಾದ ನಿಲ್ದಾಣದಲ್ಲಿ ಕಾರ್ಮಿಕರು ಕೆಸರು ಹಾಗೂ ನೀರನ್ನು ಹೊರಹಾಕಲು ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net