

ಗುಂಡ್ಲುಪೇಟೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಅರಿಶಿಣಕ್ಕೆ ಬೇಡಿಕೆಯಿದ್ದು ಬೆಳೆಗಾರರು ಇದರ ಉತ್ಪಾದನೆಗೆ ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿವೃತ್ತ ಉಪ ಮಹಾ ನಿರ್ದೇಶಕ ಡಾ.ಎನ್.ಕೆ.ಕೃಷ್ಣಕುಮಾರ್ ಹೇಳಿದರು.
ಸೋಮವಾರ ಪಟ್ಟಣದ ಗುರುಭವನದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಅರಿಷಿಣ ಬೆಳೆಗಾರರ ತಾಲೂಕು ಒಕ್ಕೂಟ ಆಯೋಜಿಸಿದ್ದ ರಫ್ತು ಗುಣಮಟ್ಟದ ಅರಿಶಿಣ ಉತ್ಪಾದನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಅರಿಶಿಣ ಬಳಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಸೌಂದರ್ಯ ವರ್ಧಕವಾಗಿಯೂ ಬಳಕೆಯಾಗುವ ಕಾರಣ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆಮದು ಉತ್ಪನ್ನಗಳಲ್ಲಿ ವಿಷಕಾರಕ ರಾಸಾಯನಿಕ ಅಂಶಗಳು ಪತ್ತೆಯಾದರೆ ಅದನ್ನು ವಿದೇಶಿ ಸಂಸ್ಥೆಗಳು ತಿರಸ್ಕರಿಸುತ್ತವೆ. ಆದ್ದರಿಂದ ಸರ್ಕಾರ ಸ್ಥಳೀಯವಾಗಿ ಪ್ರಯೋಗಾಲಯ ಸ್ಥಾಪಿಸಿ ಗುಣಮಟ್ಟದ ಉತ್ಪನ್ನ ಹೆಚ್ಚಿಸಲು ಕ್ರಮ ವಹಿಸಬೇಕು. ಇದಕ್ಕಾಗಿ ಅರಿಶಿಣ ಮಂಡಲಿ ರಚಿಸಿ ತಜ್ಞರಿಂದ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು ಎಂದರು.
ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅರಿಶಿಣ ಬೆಳೆಯಲಾಗುತ್ತಿದ್ದು ಈ ರಾಜ್ಯಗಳ ರೈತರ ಸಮಾವೇಶ ಆಯೋಜಿಸಿ ವಿಚಾರ ವಿನಿಮಯಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಾಗಬೇಕು ಎಂದು ಹೇಳಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅರಿಶಿಣಕ್ಕೆ ಉತ್ತಮ ಬೆಲೆಯಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ದರ ಕುಸಿತವನ್ನು ಎದುರಿಸುತ್ತಿರುವ ರೈತರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸುವಂತೆ ಮಾಡಿ ವಿದೇಶಿ ವಿನಿಮಯದಿಂದ ಹೆಚ್ಚಿನ ಆದಾಯ ತಂದುಕೊಡಬೇಕು ಎಂದು ಡಾ.ಎನ್.ಕೆ.ಕೃಷ್ಣಕುಮಾರ್ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಮಣ್ಣು ವಿಜ್ಞಾನಿ ರಾಜಣ್ಣ, ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್ ಪ್ರಾಧ್ಯಾಪಕ ಡಾ. ಬಿ.ಎಸ್. ಹರೀಶ್, ಕೃಷಿ ಕೀಟಶಾಸ್ತ್ರ ಪ್ರಾಧ್ಯಾಪಕ ದಾ.ರಾಮೇಗೌಡ, ಕೇಂದ್ರ ಸಾಂಬಾರ ಮಂಡಳಿ ಹಿರಿಯ ಕ್ಷೇತ್ರಾಧಿಕಾರಿ ಎಸ್.ಕುಮಾರ್, ಓಲೆಂ ಫುಡ್ ಇಂಗ್ರೀಡಿಯೆಂಟ್ಸ್ ಸಂಸ್ಥೆಯ ಪೊನ್ನಪ್ಪ, ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖೆ ಸಹಾಯಕ ವ್ಯವಸ್ಥಾಪಕ ಎಸ್.ಶಿವಸ್ವಾಮಿ ಉಪನ್ಯಾಸ ನೀಡಿದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜು, ಕೃಷಿಕ ಸಮಾಜದ ಉಪಾಧ್ಯಕ್ಷ ಭಿಕ್ಷೇಶ್ ಪ್ರಸಾದ್, ರಾಜ್ಯ ಅರಿಷಿಣ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು, ವಿವಿಧ ಭಾಗಗಳ ರೈತರು ಇದ್ದರು.