

ಗುಂಡ್ಲುಪೇಟೆ: ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದರೂ ನದಿ ಮೂಲದಿಂದ ಕೆರೆಗಳಿಗೆ ನೀರು ಹರಿಸದಿರುವುದು ರೈತಾಪಿ ವರ್ಗದ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಮೂರು ತಿಂಗಳಿಂದ ತಾಲೂಕಿನ ಹುತ್ತೂರು ಕೆರೆಗೆ ನೀರು ತುಂಬಿಸುತ್ತಿದ್ದರೂ ಗುಂಡ್ಲುಪೇಟೆಯ ಶ್ಯಾನಾಡ್ರಹಳ್ಳಿ, ಬಲಚವಾಡಿ ಹಾಗೂ ತೆರಕಣಾಂಬಿ ಕೆರೆ ಹೊರತುಪಡಿಸಿ ಇನ್ಯಾವುದೇ ಕೆರೆಗಳಿಗೆ ನೀರು ಹರಿಸಿಲ್ಲ. ಇದರಿಂದ ಕಳೆದ ಬಾರಿ ನೀರು ತುಂಬಿಸಿದ್ದ ವಡ್ಡಗೆರೆ, ಕರಕಲಮಾದಹಳ್ಳಿ, ದಾರಿ ಬೇಗೂರು, ಯರಿಯೂರು, ಕೊಡಸೋಗೆ, ಬೊಮ್ಮಲಾಪುರ, ಶಿವಪುರ ಹಾಗೂ ವಿಜಯಪುರ ಅಮಾನಿ ಕೆರೆಗಳಲ್ಲಿ ನೀರಿಲ್ಲದಂತಾಗಿದೆ.
ಮಳೆಯ ಕೊರತೆ ಹಾಗೂ ದಿನೇ ದಿನೆ ಹೆಚ್ಚುತ್ತಿರುವ ತಾಪಮಾನದಿಂದ ಅಂತರ್ಜಲ ಸಮಸ್ಯೆ ಬಿಗಡಾಯಿಸುತ್ತಿದೆ. ಕಳೆದ ವರ್ಷ ಕೋಡಿಬಿದ್ದಿದ್ದ ಕೆರೆಗಳು ಒಣಗಿ ಆಕಾಶಕ್ಕೆ ಬಾಯ್ದೆರೆದಿವೆ. ಕಳೆದ ವರ್ಷ ಕೆರೆಗಳಿಗೆ ನೀರು ತುಂಬಿಸಿದ್ದು ಹಾಗೂ ಉತ್ತಮ ಮಳೆಬಿದ್ದ ಪರಿಣಾಮ ಉಕ್ಕಿಹರಿದಿದ್ದ ಕೊಳವೆ ಬಾವಿಗಳಲ್ಲಿ ನೀರು ದೊರಕದೆ ರೈತರು ತಲೆಯ ಮೇಲೆ ಕೈ ಹೊತ್ತಿದ್ದಾರೆ. ಹೊಸದಾಗಿ ಕೊಳವೆ ಬಾವಿ ಕೊರೆಸಿದರೂ ಸಮರ್ಪಕ ಪ್ರಮಾಣದಲ್ಲಿ ನೀರು ದೊರಕದೆ ಟ್ಯಾಂಕರ್ ಮೂಲಕ ನೀರು ಹರಿಸುವಂತಾಗಿದೆ. ಇದರಿಂದ ಫಸಲು ಉಳಿಸಿಕೊಳ್ಳುವುದು ಭಾರಿ ಸವಾಲಾಗಿದೆ.
ಈಗಾಗಲೇ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿದ್ದರೂ ಜಿಲ್ಲಾಡಳಿತ ರೈತರಿಗೆ ಅನುಕೂಲವಾಗುವ ಯಾವುದೇ ಪರಿಹಾರಾತ್ಮಕ ಕ್ರಮ ಕೈಗೊಂಡಿಲ್ಲ. ಕೆರೆಗಳಿಗೆ ನೀರು ತುಂಬಿಸಲು ಮುಂದಾಗಿಲ್ಲ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆಯಾಗಿದ್ದರೂ ಗೋಶಾಲೆ ಆರಂಭಿಸಿ ಮೇವು ಒದಗಿಸುತ್ತಿಲ್ಲ. ಇದರಿಂದ ಹೈನುಗಾರರು ದುಬಾರಿ ಬೆಲೆತೆತ್ತು ಮೇವು ಖರೀದಿಸುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2022ರ ಜುಲೈನಿಂದ 2023 ಏಪ್ರಿಲ್‌ವರೆಗೂ ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಲಾಗಿತ್ತು. ಇದೇ ಸಂದರ್ಭದಲ್ಲಿ ಉತ್ತಮ ಮಳೆಯೂ ಬಿದ್ದಿದ್ದರಿಂದ 3 ದಶಕಗಳಿಂದ ನೀರು ಕಾಣದ ದೊಡ್ಡ ದೊಡ್ಡ ಕೆರೆಗಳು ಹಾಗೂ ಜಲಾಶಯಗಳು ತುಂಬಿ ಕೋಡಿ ಬಿದ್ದಿದ್ದವು. ಕಾಡಂಚಿನ ದೊಡ್ಡ ದೊಡ್ಡ ಕೆರೆಗಳು ತುಂಬಿ ಹರಿದ ಪರಿಣಾಮ ಗುಂಡ್ಲು ನದಿ ಪಾತ್ರದಲ್ಲಿ ನೀರು ಹರಿದಿತ್ತು.
ಸಂಧಾನ ಸೂತ್ರ:
ಮೂರು ವರ್ಷಗಳ ಹಿಂದೆ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ರೈತರ ನಡುವೆ ವೈಮನಸ್ಸು ಉಂಟಾಗಿತ್ತು. ಚಾಮರಾಜನಗರ ತಾಲೂಕಿನ ಕಿಲಗೆರೆ ರೈತರು ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಹುತ್ತೂರು ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಸಂಧಾನ ಸೂತ್ರ ರೂಪಿಸಿ ಒಂದು ವರ್ಷ ಚಾಮರಾಜನಗರಕ್ಕೆ ಮತ್ತೊಂದು ವರ್ಷ ಗುಂಡ್ಲುಪೇಟೆ ಕೆರೆಗಳಿಗೆ ನೀರು ಹರಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ 2024ರಲ್ಲಿ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ಮಾತ್ರ ನೀರು ಹರಿಸಲಾಗುತ್ತಿದೆ.
ಆಲಂಬೂರು ಏತ ನೀರಾವರಿ ಯೋಜನೆಯಲ್ಲಿ ತಮ್ಮಡಹಳ್ಳಿ ಪಂಪ್‌ಹೌಸ್‌ನಿಂದ ಹುತ್ತೂರು ಕೆರೆಗೆ ನೀರು ತುಂಬಿಸಿ ಅಲ್ಲಿಂದ ಚಾಮರಾಜನಗರ ತಾಲೂಕಿನ ಕಿಲಗೆರೆ, ಮೇಲೂರು, ನರಸಮಂಗಲ ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು. ಹುತ್ತೂರು ಕೆರೆಯ ಮುಂದುವರಿದ ಯೋಜನೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ಮೋಟಾರ್ ಮೂಲಕ ನೀರು ಹರಿಸಿ ನಂತರ ಕರಕಲಮಾದಹಳ್ಳಿ, ದಾರಿಬೇಗೂರು, ಯರಿಯೂರು, ಕೊಡಸೋಗೆ, ಬೊಮ್ಮಲಾಪುರ, ಶಿವಪುರದ ಕಲ್ಲುಕಟ್ಟೆಹಳ್ಳ ಜಲಾಶಯ, ವಿಜಯಪುರ ಅಮಾನಿಕೆರೆ, ಚಿಕ್ಕಕೆರೆ ಮೂಲಕ ನಲ್ಲೂರು ಅಮಾನಿ ಕೆರೆಗೆ ನೀರು ಹರಿಸುವ ಯೋಜನೆ ಜಾರಿಗೊಳಿಸಲಾಯಿತು. ಇತ್ತೀಚೆಗೆ ಚಾಮರಾಜನಗರದ ಆನೆಮಡುವಿನ ಕೆರೆಯೂ ಸೇರಿಕೊಂಡಿದೆ. ಇದರಿಂದ 134 ದಿನಗಳಲ್ಲಿ ಎಲ್ಲ ಕೆರೆಗಳಿಗೂ ನೀರು ತುಂಬಿಸುವುದು ನೀರಾವರಿ ನಿಗಮಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ 2019ರಲ್ಲಿ ವಡ್ಡಗೆರೆ ಕೆರೆಗೆ ಪೈಪ್‌ಲೈನ್ ಅಳವಡಿಸಿದ್ದರೂ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಪುಟ್ಟರಂಗಶೆಟ್ಟಿ ನೀರು ಹರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಬೀದಿಗಿಳಿದ ರೈತರು ಪಂಪ್ ಹೌಸ್‌ಗೆ ಮುತ್ತಿಗೆ ಹಾಕಿ ಮೂರು ದಿನಗಳು ಅಹೋರಾತ್ರಿ ಧರಣಿ ನಡೆಸಿದ್ದರು. ನಂತರ ವಡ್ಡಗೆರೆ ಕೆರೆಗೆ ಸಾಂಕೇತಿಕವಾಗಿ ನೀರು ಹರಿಸಿದರೂ ಕೆರೆ ತುಂಬಿಸಲಿಲ್ಲ.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಸೂಚನೆ ನೀಡಲಾಗಿದ್ದು, ಈಗಾಗಲೇ ಹನೂರಿನಲ್ಲಿ ಗೋಶಾಲೆ ಆರಂಭಿಸಲಾಗಿದೆ. ಅಧಿಕಾರಿಗಳ ವರದಿಯ ಮೇರೆಗೆ ಗುಂಡ್ಲುಪೇಟೆ ತಾಲೂಕಿನಲ್ಲಿ ಕೊಳವೆಬಾವಿ ಕೊರೆಸಲು ಅನುದಾನ ನೀಡಲಾಗಿದ್ದು ಮೇವಿನ ಕೊರತೆಯಾದರೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಬಗ್ಗೆ ತಕ್ಷಣ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು.ಶಿಲ್ಪಾನಾಗ್, ಜಿಲ್ಲಾಧಿಕಾರಿ ಹಿಂದೆ ವರ್ಷಕ್ಕೊಂದು ತಾಲೂಕಿನ ಕೆರೆಗೆ ನೀರು ಹರಿಸುವ ನಿಯಮ ರೂಪಿಸಿದ್ದರಿಂದ ಈ ಬಾರಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ವಿಳಂಬವಾಗಿದೆ. ಕೂಡಲೇ ಒಂದು ವಾರದ ಮಟ್ಟಿಗಾದರೂ ನೀರು ಹರಿಸುವಂತೆ ಸೂಚಿಸಲಾಗಿದೆ.ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ