

ಗುಂಡ್ಲುಪೇಟೆ: ಪ್ರತಿಯೊಬ್ಬರೂ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಹೇಳಿದರು.
ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಗುರುವಾರ ಬೆಟ್ಟದ ತಪ್ಪಲಿನಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಏ.26 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎಲ್ಲರೂ ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ, ಕಡ್ಡಾಯವಾಗಿ ಮತದಾನ ಮಾಡಿ ಹಾಗೂ ನೈತಿಕ ಮತದಾನ ಬೆಂಬಲಿಸಿ. ಮತದಾನ ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವಲ್ಲಿ ತನ್ನದೇ ಆದ ಪಾತ್ರವಹಿಸುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿ, ದೇಶವನ್ನು ನಡೆಸಲು ನಿಮ್ಮ ಒಂದು ಮತ ಬಹಳ ಅಮೂಲ್ಯ. ಹಣದ ಆಸೆಗೆ ಮತ ಮಾರಿಕೊಳ್ಳಬೇಡಿ. ನಿಮಗೆ ಮೂಲಸೌಕರ್ಯ ಒದಗಿಸಲು ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ರಾಮಲಿಂಗಯ್ಯ, ಸಾರ್ವಜನಿಕರಿಗೆ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮತದಾನದ ಆಹ್ವಾನ ಪತ್ರವನ್ನು ನೀಡಿ ಕಡ್ಡಾಯ ಮತದಾನ ಮಾಡಲು ಕೋರಲಾಯಿತು. ತಹಸೀಲ್ದಾರ್ ಮಂಜುನಾಥ, ಮಲೆ ಮಹದೇಶ್ವರ ಬೆಟ್ಟ ಹುಲಿ ಯೋಜನೆ ಡಿ.ಸಿ.ಎಫ್. ಸಂತೋಷ್ ಕುಮಾರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್, ಗೋಪಾಲಸ್ವಾಮಿ ಬೆಟ್ಟ ವಲಯದ ಆರ್‌ಎಫ್‌ಒ ಮಂಜುನಾಥ್, ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ನೌಕರರು ಇದ್ದರು.