ಸೋಲಾರ್ ವಿದ್ಯುತ್ ದೀಪ ದುರಸ್ತಿಗೆ ಆಗ್ರಹ

Published on

ಗುಂಡ್ಲುಪೇಟೆ: ಪುರಸಭೆಯು ಪಟ್ಟಣದ ನಾನಾ ಭಾಗಗಳಲ್ಲಿ ಅಳವಡಿಸಿರುವ ಸೋಲಾರ್ ವಿದ್ಯುತ್ ದೀಪಗಳು ಬೀದಿಪಾಲಾಗುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

ಪ್ರತಿ ವರ್ಷವೂ ಪುರಸಭೆಯು ತನ್ನ ಅನುದಾನದಲ್ಲಿ ಪಟ್ಟಣದ ಹಲವಾರು ಬಡಾವಣೆಗಳಲ್ಲಿ ಸೌರಶಕ್ತಿ ಚಾಲಿತವಾದ ಬೀದಿ ದೀಪಗಳನ್ನು ಅಳವಡಿಸುತ್ತಿದೆ. ಆದರೆ ದೀಪದ ನಿರ್ವಹಣೆಯ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ಪರಿಣಾಮ ಬಹುತೇಕ ದೀಪಗಳು ನಿರುಪಯುಕ್ತವಾಗುತ್ತಿವೆ. ನಿರ್ಜನ ಪ್ರದೇಶದಲ್ಲಿ ಅಳವಡಿಸಿದ್ದ ದೀಪಗಳಲ್ಲಿ ಕಳ್ಳರು ಬ್ಯಾಟರಿಗಳನ್ನು ಕದಿಯುತ್ತಿದ್ದರೆ ಕಳಪೆ ಕಾಮಗಾರಿಯಿಂದ ಬಹುತೇಕ ದೀಪಗಳು ಕಂಬ ಸಮೇತ ಬೀಳುತ್ತಿವೆ.

ಕುಂಬಾರ ಬಡಾವಣೆಯಲ್ಲಿ ಅಳವಡಿಸಿದ್ದ ಬೀದಿದೀಪ ಕಂಬ ಸಮೇತ ಕಳೆದ ಹತ್ತು ದಿನಗಳಿಂದ ನೆಲಕ್ಕುರುಳಿದೆ. ಈ ಬಗ್ಗೆ ಪುರಸಭೆಗೆ ಮಾಹಿತಿ ನೀಡಿದ್ದರೂ ಅದನ್ನು ಸರಿಪಡಿಸಲು ಮುಂದಾಗಿಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿದ ಈ ದೀಪಗಳನ್ನು ಒಮ್ಮೆ ಅಳವಡಿಸಿದ ನಂತರ ಅದರ ನಿರ್ವಹಣೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಇದೇ ಧೋರಣೆ ಮುಂದುವರಿಸಿದರೆ ನಿವಾಸಿಗಳ ಜತೆಗೂಡಿ ಪುರಸಭೆಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರವೇ ತಾಲೂಕು ಅಧ್ಯಕ್ಷ ಸುರೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net