ಶಿಥಿಲಾವಸ್ಥೆ ತಲುಪಿದ ಅಂಗನವಾಡಿ ಕಟ್ಟಡ

IMG-20230706-WA0094
Published on

ಗುಂಡ್ಲುಪೇಟೆ: ತಾಲೂಕಿನ ಕೂತನೂರು ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಪಾಲಕರು ತಮ್ಮ ಮಕ್ಕಳನ್ನು ಕಳುಹಿಸಲು ಭಯಪಡುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಅಂಗನವಾಡಿ ಕಟ್ಟಡದ ಛಾವಣಿಯ ಗಾರೆ ಕಿತ್ತು ಬೀಳುತ್ತಿದ್ದು, ಕಬ್ಬಿಣದ ಸರಳು ಹೊರಗೆ ಕಾಣುತ್ತಿವೆ. ಕೇಂದ್ರದಲ್ಲಿ ಹತ್ತಾರು ಮಕ್ಕಳು ಕಲಿಯುತ್ತಿದ್ದಾರೆ. ಮಧ್ಯಾಹ್ನ ದ ನಂತರ ಮಕ್ಕಳು ಅಲ್ಲೇ ಮಲಗುತ್ತಾರೆ. ಈ ಸಂದರ್ಭದಲ್ಲಿ ಗಾರೆ ಮಕ್ಕಳ ಮೇಲೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲದೆ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಾದ ಗರ್ಭಿಣಿ ಹಾಗೂ ಬಾಣಂತಿಯರೂ ಈ ಕೇಂದ್ರಕ್ಕೆ ಆತಂಕದಿಂದಲೇ ಬರುವಂತಾಗಿದೆ.

ಅಡುಗೆ ಕೊಠಡಿಯಲ್ಲಿ ಇಲಿ ಹಾಗೂ ಹೆಗ್ಗಣ ಗುಂಡಿಗಳನ್ನು ನಿರ್ಮಾಣ ಮಾಡಿವೆ. ಮಕ್ಕಳಿಗೆ ಕೊಡುವ ಮೊಟ್ಟೆಗಳನ್ನು ತಿಂದು ನಾಶಪಡಿಸುತ್ತಿವೆ. ಇದರಿಂದ ಮಕ್ಕಳಿಗೆ ಸೋಂಕು ತಗುಲುವ ಭೀತಿಯೂ ಎದುರಾಗಿದೆ. ಅಂಗನವಾಡಿ ಕೇಂದ್ರ ಶಿಥಿಲಾವಸ್ಥೆ ತಲುಪಿದ್ದ ಹಿನ್ನೆಲೆಯಲ್ಲಿ ಒಂದು ವರ್ಷದ ಹಿಂದೆ ನರೇಗಾ ಯೋಜನೆಯಡಿ ಸಣ್ಣಪುಟ್ಟ ಕಾಮಗಾರಿ ಮಾಡಲಾಗಿತ್ತು. ಇತರ ಗ್ರಾಮಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮೂರಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಸುಮಾರು ನಾಲ್ಕು ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು.ಹೇಮಾವತಿ ಸಿಡಿಪಿಒ ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net