

ಗುಂಡ್ಲುಪೇಟೆ: ದಿನೇ ದಿನೆ ಏರುತ್ತಿರುವ ತಾಪಮಾನದಿಂದ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದು, ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ.
ಪಟ್ಟಣದ ಮಹದೇವಪ್ರಸಾದ್ ನಗರ, ಜಾಕೀರ್ ಹುಸೇನ್ ಬಡಾವಣೆ, ಕೆ.ಎಸ್.ನಾಗರತ್ನಮ್ಮ ಬಡಾವಣೆ ಸೇರಿದಂತೆ ಇನ್ನೂ ಹಲವಾರು ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ನೇನೆಕಟ್ಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಬಡಾವಣೆಯ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿಲ್ಲದ ಕಾರಣ ಟ್ಯಾಂಕರ್‌ಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಹಣ ಕೊಟ್ಟು ನೀರು ಖರೀದಿಸುವಂತಾಗಿದೆ.
ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ನಂಜನಗೂಡು ಸಮೀಪದ ದೇಬೂರು ಪಂಪ್‌ಹೌಸ್‌ನಲ್ಲಿ ಅಳವಡಿಸಿದ್ದ ಡಿಜಿಟಲ್ ಸ್ಟಾರ್ಟರ್ ಕೆಟ್ಟಿದ್ದರಿಂದ 23 ದಿನಗಳಿಂದ ಕುಡಿಯುವ ನೀರಿನ ಸರಬರಾಜಿನ ಮೇಲೆ ದುಷ್ಪರಿಣಾಮ ಬೀರಿದೆ. ಸ್ಟ್ರಾರ್ಟರ್ ರಿಪೇರಿ ಮಾಡಿಸಿದರೂ ಸಿಂಧುವಳ್ಳಿ ಹಾಗೂ ಬೆಳಚಲವಾಡಿಯ ಪಂಪ್ ಹೌಸ್‌ಗಳಲ್ಲಿ ಸಮಸ್ಯೆ ತಲೆದೋರಿದೆ. ಇದರಿಂದ ಪಟ್ಟಣದ ನಾನಾ ಬಡಾವಣೆಯಲ್ಲಿರುವ ಕೊಳವೆ ಬಾವಿಗಳಿಂದಲೇ ನಾಗರಿಕರ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು ಇದೂ ಸಾಲದೆ ಹಣಕೊಟ್ಟು ಖರೀದಿಸುವಂತಾಗಿದೆ. ಕಬಿನಿ ನೀರು ಬರುತ್ತಿದ್ದಾಗ ಮನೆಗಳಿಗೆ ವಾರಕ್ಕೆರಡು ಬಾರಿ ನೀರು ಬಿಡಲಾಗುತ್ತಿತ್ತು. ಆದರೆ ಕೊಳವೆ ಬಾಯಿಗಳಲ್ಲಿಯೂ ಸಮರ್ಪಕ ಪ್ರಮಾಣದಲ್ಲಿ ನೀರು ದೊರಕದ ಕಾರಣ ವಾರಕ್ಕೊಮ್ಮೆಯೂ ಬಿಡುತ್ತಿಲ್ಲ. ನೀರಿನ ಕೊರತೆಯಿರುವ ಕಡೆಗಳಿಗೆ ಟ್ಯಾಂಕರ್ ಮೂಲಕ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದ್ದರೂ ಪುರಸಭೆಯು ಪೂರೈಸುವ ಒಂದು ಡ್ರಂ ನೀರು ಮನೆ ಬಳಕೆಗೆ ಸಾಲದಂತಾಗಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಜಲಜೀವನ್ ಮಿಷನ್ ಯೋಜನೆಯಲ್ಲಿಯೂ ಮನೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ಪರಿಣಾಮ ಸಮಸ್ಯೆ ಬಿಗಡಾಯಿಸಿಲ್ಲ. ಆದರೆ ಹಿಂದೆ ಪಟ್ಟಣಕ್ಕೆ ಕುಡಿವ ನೀರು ಪೂರೈಸುವ ಕಬಿನಿ ಪೈಪ್‌ಲೈನ್‌ನಿಂದ ನೀರು ಪೂರೈಸುತ್ತಿದ್ದ ತೊಂಡವಾಡಿ ಬೇಗೂರು ಸೇರಿದಂತೆ 34 ಗ್ರಾಮಗಳಿಗೂ ಸುಮಾರು 34 ಗ್ರಾಮಗಳು ಹಾಗೂ ಕೆ.ಎಚ್.ಬಿ. ಬಡಾವಣೆಗೆ ಕಬಿನಿಯಿಂದಲೇ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಸದ್ಯ ಅದನ್ನು ನಿಲ್ಲಿಸಲಾಗಿದೆ. ಇವುಗಳಿಗೆ ಕಬಿನಿ ನೀರು ನಿಲ್ಲಿಸಿದರೂ ಇನ್ನೂ ಬಹುಗ್ರಾಮ ಯೋಜನೆಯ ಸಂಪರ್ಕ ನೀಡಿಲ್ಲ. ಅಲ್ಲದೆ ಕೊಳವೆಬಾವಿಗಳಲ್ಲಿ ನೀರು ದೊರಕದಂತಾಗಿರುವುದು ಸಮಸ್ಯೆ ಉಲ್ಬಣಿಸುವಂತೆ ಮಾಡಿದೆ. ಕೆ.ಎಚ್.ಬಿ ಕಾಲನಿಯಲ್ಲಿ ಅಂತರ್ಜಲ ಮಟ್ಟ ಇಳಿಕೆಯಿಂದ ಹಳೆಯ ಕೊಳವೆ ಬಾವಿಗಳು ನಿರುಪಯುಕ್ತವಾಗುವ ಜತೆಗೆ ಹೊಸದಾಗಿ ಕೊರೆದ ಎರಡು ಕೊಳವೆ ಬಾವಿಗಳಲ್ಲಿಯೂ ನೀರು ಲಭ್ಯವಾಗದೆ ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ.
ನೀರಿನ ಕೊರತೆಯಿರುವ ಬಡಾವಣೆಗಳಿಗೆ ಪ್ರತಿ ದಿನ 12 ಟ್ಯಾಂಕರ್‌ಗಳಲ್ಲಿ ನೀರುಸರಬರಾಜು ಮಾಡಲಾಗುತ್ತಿದೆ. 15ನೇ ಹಣಕಾಸು ಯೋಜನೆಯಲ್ಲಿ ಹೊಸದಾಗಿ 11 ಕೊಳವೆಬಾವಿಗಳು ಮಂಜೂರಾಗಿದ್ದು ಸದ್ಯದಲ್ಲಿಯೇ ಕೊರೆಸಲಾಗುವುದು.ಶಿವಶಂಕರ ಆರಾಧ್ಯ ಕುಡಿಯುವ ನೀರು ಸರಬರಾಜು ವಿಭಾಗದ ಇಂಜಿನಿಯರ್. ಸದ್ಯ ಕೆ.ಎಚ್.ಬಿ ಬಡಾವಣೆ ಹೊರತುಪಡಿಸಿ ಗ್ರಾಮಾಂತರ ಪ್ರದೇಶದ ಯಾವುದೇ ಭಾಗದಲ್ಲಿಯೂ ಕುಡಿಯುವ ನೀರಿನ ಸರಬರಾಜಿನಲ್ಲಿ ಕೊರತೆಯಾಗಿಲ್ಲ. ಆದರೂ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯೂ ಕುಡಿಯುವ ನೀರು ಸರಬರಾಜು ಮಾಡುವ ಬಗ್ಗೆ ಟೆಂಡರ್ ಕರೆಯುವ ಮೂಲಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ರಾಮಲಿಂಗಯ್ಯತಾಲೂಕು ಪಂಚಾಯಿತಿ ಇಒ