ಅರಣ್ಯ ಇಲಾಖೆ ಕಣ್ಗಾವಲಿನಲ್ಲಿ ಮಹದೇಶ್ವರ ಜಾತ್ರೆ

09-GPT-3
Published on

ಗುಂಡ್ಲುಪೇಟೆ: ಬಂಡೀಪುರ ಅರಣ್ಯದೊಳಗಿನ ತಾವರಕೆಟ್ಟೆ ಮಹದೇಶ್ವರರ ಜಾತ್ರೆ ಅರಣ್ಯ ಇಲಾಖೆಯ ಕಣ್ಗಾವಲಿನಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಜಾತ್ರೆಗೆ ಆಗಮಿಸಿದ್ದ ಭಕ್ತರು ಹಾಗೂ ಆದಿವಾಸಿಗಳು ಶ್ರದ್ಧ್ದಾಭಕ್ತಿಗಳಿಂದ ಪೂಜೆ ಸಲ್ಲಿಸಿದರು. ಆದಿವಾಸಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಸಾಂಪ್ರದಾಯಿಕ ನೃತ್ಯಮಾಡುತ್ತಾ ಸಂಭ್ರಮಿಸಿದರು. ಹುಲಿ ಯೋಜನೆಯ ಬಂಡೀಪುರ ಸಫಾರಿ ವಲಯದ ಅರಣ್ಯ ಪ್ರದೇಶದಲ್ಲಿರುವ ತಾವರೆಕಟ್ಟೆ ಮಹದೇಶ್ವರ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಹಾಗೂ ಆದಿವಾಸಿಗಳ ಆರಾಧ್ಯದೈವವಾಗಿದೆ. ಹಿಂದೆ ಪ್ರತಿ ಸೋಮವಾರ ಹಾಗೂ ಶುಕ್ರವಾರ ಮತ್ತು ವಿಶೇಷ ದಿನಗಳಲ್ಲಿ ಭಕ್ತರು ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದ ನಂತರ ಸಾರ್ವಜನಿಕರ ಮುಕ್ತ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಆದರೆ, ಪ್ರತಿ ವರ್ಷವೂ ಶಿವರಾತ್ರಿ ಹಬ್ಬದ ಮರು ದಿನ ಜಾತ್ರೆ ನಡೆಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿದೆ. ಜಾತ್ರೆಗೆ ಬರುವ ಭಕ್ತರು ಹಾಗೂ ಆದಿವಾಸಿಗಳನ್ನು ದೇವಾಲಯಕ್ಕೆ ಕರೆದೊಯ್ದ ನಂತರ ಹೊರಗೆ ಕರೆತರಲು ವಾಹನಗಳ ವ್ಯವಸ್ಥೆ ಮಾಡುವ ಜತೆಗೆ ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದ ನೀಡುವ ವ್ಯವಸ್ಥೆಯನ್ನೂ ಮಾಡುತ್ತಿದೆ. ಈ ಮೂಲಕ ಬೇಸಿಗೆ ಸಂದರ್ಭದಲ್ಲಿ ಕಾಡಿಗೆ ಆಕಸ್ಮಿಕವಾಗಿ ಬೆಂಕಿಬಿದ್ದರೆ ಕಾಡಂಚಿನ ಜನರು ಹಾಗೂ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net