ಗುಂಡ್ಲುಪೇಟೆ: ತಾಲೂಕಿನ ಕಡಬೂರು ಸಮೀಪ ಆನೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಜೀಪ್ ಮೇಲೆ ಆನೆ ದಾಳಿ ಮಾಡಿದೆ. ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಲ್ಲಿ ಜಮೀನುಗಳತ್ತ ದಾಳಿ ನಡೆಸುವ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸುವಾಗ ಮಂಗಳವಾರ ನಸುಕಿನಲ್ಲಿ ಘಟನೆ ನಡೆದಿದೆ.
ಕಡಬೂರು ಬೀಟ್ ಸಮೀಪ ಆನೆಯನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದಾಗ ಆನೆ ಹಿಂದಿರುಗಿ ಜೀಪನ್ನು ನೂಕಿದ್ದರಿಂದ ಸಮೀಪ ಕಂದಕಕ್ಕೆ ಬಿದ್ದಿದೆ.
ಘಟನೆಯಲ್ಲಿ ಆನೆ ಕಾವಲು ನಡೆಸುತ್ತಿದ್ದ ಇಬ್ಬರು ಕಾವಲುಗಾರರು ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಕಂದಕಕ್ಕೆ ಬಿದ್ದರೂ ಜೀಪಿಗೆ ಸ್ವಲ್ಪವೂ ಜಖಂ ಆಗಿಲ್ಲ. ವಿಷಯ ತಿಳಿದ ಆರ್‌ಎಫ್‌ಒ ಎನ್.ಪಿ.ನವೀನ್ ಕುಮಾರ್, ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ರವೀಂದ್ರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.