ಮಳೆಯಾಗದೆ ಫಸಲು ನಾಶ

b07572dc-4cb6-4830-8bdb-0a76b076ea25
Published on

ಗುಂಡ್ಲುಪೇಟೆ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತಾಲೂಕಿನಾದ್ಯಂತ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬಹುತೇಕ ಫಸಲುಗಳು ನಾಶವಾಗುವ ಭೀತಿ ಎದುರಾಗಿದೆ.

ಮುಂಗಾರು ಮಳೆ ಸಮರ್ಪಕವಾಗಿ ಬೀಳದ ಪರಿಣಾಮ ಎಲ್ಲ ಬೆಳೆಗಳು ಬಾಡುತ್ತಿವೆ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ ಗಿಡಗಳು ನೆಲಮಟ್ಟದಲ್ಲಿಯೇ ಹೂ ಬಿಡುತ್ತಿದ್ದು ಕಾಳುಕಟ್ಟುವ ಸಾಧ್ಯತೆ ಕ್ಷೀಣಿಸಿದೆ. ಜಾನುವಾರುಗಳ ಮೇವಿಗೆ ಮೂಲವಾದ ಜೋಳದ ಗಿಡಗಳು ಬಿಸಿಲಿನ ತಾಪಕ್ಕೆ ಮುರುಟಿ ಹೋಗುತ್ತಿದ್ದು, ಈ ಬಾರಿ ಮೇವಿನ ಕೊರತೆ ಎದುರಾಗುವ ಸಂಭವ ಹೆಚ್ಚಾಗಿದೆ.

ತಾಲೂಕಿನಲ್ಲಿ ಮುಂಗಾರು ಮಳೆಗೆ ಸುಮಾರು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 8700 ಹೆಕ್ಟೇರ್ ಜೋಳ, 90 ಹೆಕ್ಟೇರ್ ಅಲಸಂದೆ, 300 ಹೆಕ್ಟೇರ್ ನೆಲಗಡಲೆ, 200 ಹೆಕ್ಟೇರ್ ಮುಸುಕಿನ ಜೋಳ ಹಾಗೂ 2580 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಆದರೆ ಸಮರ್ಪಕವಾಗಿ ಮಳೆ ಬೀಳದ ಪರಿಣಾಮ ಬಹುತೇಕ ಬೆಳೆಗಳು ನಾಶವಾಗುವ ಭೀತಿ ಎದುರಾಗಿದೆ. ಮೇ ತಿಂಗಳ ಆರಂಭದಲ್ಲಿ ಬಿದ್ದ ಮಳೆ ಜೂನ್ ಅಂತ್ಯದವರೆಗೂ ಸುಮಾರು ಒಂದು ತಿಂಗಳವರೆಗೂ ಬೀಳದೆ ಫಸಲುಗಳು ಬಾಡುತ್ತಿವೆ.

ಪ್ರತಿ ವರ್ಷವೂ 68 ದಿನ ವಾಡಿಕೆ ಮಳೆ ಬೀಳಬೇಕಾಗಿದೆ. ಕಳೆದ ವರ್ಷ 120 ರಿಂದ 130 ದಿನಗಳಷ್ಟು ಮಳೆ ಬಿದ್ದಿದ್ದರೆ ಈ ಬಾರಿ 31 ದಿನ ಮಾತ್ರ ಬಿದ್ದಿದ್ದು ಶೇ.50ಕ್ಕಿಂತಲೂ ಹೆಚ್ಚಿನ ಕೊರತೆಯಾಗಿದೆ. ಕೂಡಲೇ ಮಳೆ ಬೀಳದಿದ್ದರೆ ಸಂಪೂರ್ಣ ನಾಶವಾಗುವ ಅಪಾಯ ಎದುರಾಗಿದೆ.
ಈ ಬಾರಿ ಕೃಷಿ ಇಲಾಖೆಯು ರಿಯಾಯಿತಿ ದರದಲ್ಲಿ ವಿತರಣೆ ಮಾಡುತ್ತಿರುವ ಬಿತ್ತನೆ ಬೀಜಗಳಿಗೆ ಬೆಲೆ ಏರಿಕೆ ಮಾಡಿತ್ತು. ಅಲ್ಲದೆ ಬಿತ್ತನೆ ಸಂದರ್ಭದಲ್ಲಿ ಗೊಬ್ಬರ, ಕಾರ್ಮಿಕರ ಹಾಗೂ ಏರುಗಳ ಬೆಲೆ ಏರಿಕೆಯಿಂದ ಪ್ರತಿ ಎಕರೆಗೆ 10 ರಿಂದ 12 ಸಾವಿರ ರೂ.ಗಳಿಗೆ ಏರುವ ಮೂಲಕ ಬಿತ್ತನೆ ಕಾರ್ಯ ದುಬಾರಿಯಾಗಿ ಪರಿಣಮಿಸಿತ್ತು. ಆದರೆ ಸಕಾಲದಲ್ಲಿ ಸಮರ್ಪಕ ಮಳೆ ಬೀಳದೆ ಬಿತ್ತನೆಗೆ ಮಾಡಿದ್ದ ವೆಚ್ಚವೂ ಕೈಗೆ ಸಿಗದಂತಾಗಿದೆ ಎಂದು ರೈತರು ಹತಾಶೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರೈತ ಸುರಕ್ಷಾ-ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಅಧಿಸೂಚಿತ ಮುಖ್ಯಬೆಳೆಗಳನ್ನು ಪ್ರಕಟಿಸಲಾಗಿದ್ದು, ತಾಲೂಕಿನ ಮಳೆಯಾಶ್ರಿತ ಸೂರ್ಯಕಾಂತಿ ಹಾಗೂ ಜೋಳಗಳಿಗೆ ಬೆಳೆ ವಿಮೆ ವ್ಯಾಪ್ತಿಗೆ ತರಲಾಗಿದೆ. ತಾಲೂಕಿನಲ್ಲಿ ಈಗಾಗಲೇ ಸೂರ್ಯಕಾಂತಿ ಬೆಳೆ ಶೇ. 50ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿದೆ. ಆದ್ದರಿಂದ ಎಲ್ಲ ರೈತರು ಸೋಮವಾರದಿಂದ ಆರಂಭವಾಗುವ ಬೆಳೆ ವಿಮೆಯನ್ನು ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.

ಕಳೆದ ವರ್ಷ ಹೆಚ್ಚಿನ ಮಳೆಯಿಂದ ಬೆಳೆಗಳು ನಾಶವಾಗಿದ್ದರೆ ಈ ಬಾರಿ ಮಳೆ ಬೀಳದೆ ನಾಶವಾಗುತ್ತಿವೆ. ಬೆಳೆವಿಮೆ ಪದ್ಧತಿಯಲ್ಲಿ ಅನುಸರಿಸುತ್ತಿರುವ ವಿಧಾನ ಅವೈಜ್ಞಾನಿಕವಾಗಿರುವುದರಿಂದ ಎಲ್ಲ ರೈತರಿಗೂ ಇದರ ಉಪಯೋಗ ದೊರಕುವುದಿಲ್ಲ. ಆದ್ದರಿಂದ ಈ ಬಾರಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ರೈತ ಸಂಘ ಒತ್ತಾಯಿಸಲಿದೆ.
ಸಂಪತ್, ರೈತ ಮುಖಂಡ, ಕುಂದಕೆರೆ

ಸಣ್ಣ ಗಿಡಗಳಲ್ಲಿಯೇ ಹೂಬಿಟ್ಟಿರುವ ಸೂರ್ಯಕಾಂತಿ ಬೆಳೆ ಬಹುತೇಕ ನಾಶವಾಗಿವೆ. ಕೂಡಲೇ ಮಳೆ ಬಿದ್ದರೆ ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಂಭವವಿದೆ.
ಕಿರಣ್‌ಕುಮಾರ್ ಕೃಷಿ ಅಧಿಕಾರಿ, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net