ಮೂಲೆ ಸೇರಿದ ಹತ್ತಾರು ವಾಹನ!

1
Published on

ಗುಂಡ್ಲುಪೇಟೆ: ಪಟ್ಟಣದ ಪುರಸಭೆ ಅಧಿಕಾರಿಗಳ ನಿರ್ಲಕ್ಷೃದಿಂದ ಕೋಟ್ಯಂತರ ರೂ. ಬೆಲೆಬಾಳುವ ಹತ್ತಾರು ವಾಹನಗಳು ಕೆಟ್ಟುನಿಂತಿದ್ದು, ಇದರಿಂದ ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಾದ್ಯಂತ ನಿತ್ಯ ಸಂಗ್ರಹವಾಗುವ ಕಸವನ್ನು ಸಾಗಿಸಲು ಪುರಸಭೆ ಅನುದಾನದಿಂದ ಖರೀದಿಸಲಾದ ಮೂರು ಚಕ್ರಗಳ ಆಟೋಗಳಿಗೆ ಸಣ್ಣಪುಟ್ಟ ನಟ್-ಬೋಲ್ಟ್ ಹಾಕಿಸದ ಪರಿಣಾಮ ಮೂಲೆಯಲ್ಲಿ ನಿಂತಿವೆ. ಇದರೊಂದಿಗೆ ಬ್ಯಾಟರಿ ಅಳವಡಿಸದ ಕಾರಣ ನಾಲ್ಕು ಚಕ್ರಗಳ ಎರಡು ಹೊಸ ವಾಹನಗಳೂ ಮೂಲೆ ಸೇರಿವೆ.

ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಸೊಳ್ಳೆಗಳ ಹಾವಳಿಗೆ ಬ್ರೇಕ್ ಹಾಕಲು ಹತ್ತಾರು ಲಕ್ಷ ರೂ.ವೆಚ್ಚ ಮಾಡಿ ಖರೀದಿಸಲಾದ ಫಾಗಿಂಗ್ ಯಂತ್ರದ ವಾಹನವನ್ನು ಒಮ್ಮೆಯೂ ಬಳಸದ್ದರಿಂದ ತುಕ್ಕು ಹಿಡಿಯುತ್ತ ನಿಂತಿದೆ. ಅಲ್ಲದೆ, ಪಟ್ಟಣದಲ್ಲಿ ಶುಚಿತ್ವ ಕಾಪಾಡುವ ಸಲುವಾಗಿ ಹೆಚ್ಚಿನ ಜನ ಸೇರುವ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಬಳಸಲೆಂದು ಮೊಬೈಲ್ ಶೌಚಗೃಹಗಳನ್ನು 12 ಲಕ್ಷ ರೂ. ನೀಡಿ ಖರೀದಿಸಲಾಗಿದೆಯಾದರೂ ಇನ್ನೂ ಉದ್ಘಾಟನೆ ಭಾಗ್ಯ ಕಾಣದೆ ನಿರುಪಯುಕ್ತವಾಗಿದೆ.

ಗೋ.ಮಧುಸೂದನ್ ವಿಧಾನಪರಿಷತ್ ಸದಸ್ಯರಾಗಿದ್ದಾಗ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡುಗೆ ನೀಡಿದ್ದ ಶವ ಸಾಗಿಸುವ ವಾಹನ ಹಾಗೂ ಪುರಸಭೆಯ ಅನುದಾನದಲ್ಲಿ ಖರೀದಿ ಮಾಡಲಾದ ವಾಹನಗಳು ನಿರ್ವಹಣೆಯಿಲ್ಲದೆ ಮೂಲೆ ಸೇರಿವೆ. ಇದರಿಂದ ಪಟ್ಟಣದ ನಿವಾಸಿಗಳು ಮೃತಪಟ್ಟ ವೇಳೆ ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಕೊಂಡೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಸ್ವಚ್ಛತೆ ಹಾಗೂ ನಿವಾಸಿಗಳ ಹಿತಾಸಕ್ತಿ ಕಾಪಾಡುವ ಸಲುವಾಗಿ ಪುರಸಭೆಗೆ ಪ್ರತಿ ವರ್ಷ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡುತ್ತಿದೆ. ಇದರೊಂದಿಗೆ ಶಾಸಕರ ನಿಧಿ, ನಗರೋತ್ಥಾನ ಯೋಜನೆಯಡಿ ಅನುದಾನವನ್ನು ದೊಡ್ಡ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಇದಲ್ಲದೆ ಆಸ್ತಿ, ನಿವೇಶನ, ನೀರಿನ ತೆರಿಗೆ, ವಾಣಿಜ್ಯ ಮಳಿಗೆಗಳು, ಕಟ್ಟಡ ನಿರ್ಮಾಣ, ವ್ಯಾಪಾರಿಗಳ ಟ್ರೇಡ್ ಲೈಸೆನ್ಸ್ ನವೀಕರಣ ಮುಂತಾದ ಬಾಬತ್ತುಗಳಿಂದ ಕೋಟ್ಯಂತರ ರೂ.ತೆರಿಗೆ ಸಂಗ್ರಹವಾಗುತ್ತಿದೆ. ಈ ಪ್ರಮಾಣದಲ್ಲಿ ಸಂಪನ್ಮೂಲ ಬರುತ್ತಿದ್ದರೂ ಬೀದಿದೀಪಗಳ ನಿರ್ವಹಣೆ, ಸಮರ್ಪಕ ಚರಂಡಿ ನಿರ್ಮಾಣ ಮುಂತಾದ ಕೆಲಸಗಳಿಗೆ ಬಳಕೆ ಮಾಡುವ ಬದಲು ಕೇವಲ ಯಂತ್ರೋಪಕರಣಗಳನ್ನು ಖರೀದಿಸಲು ಅನುದಾನ ಬಳಸಲಾಗಿದೆಯಾದರೂ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಹಾಳು ಮಾಡಲಾಗುತ್ತಿದೆ. ಈ ಮೂಲಕ ಅಧಿಕಾರಿಗಳು ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

2018ರಲ್ಲಿ ಮೂರು ಚಕ್ರದ ಆಟೋಗಳನ್ನು ಪುರಸಭೆ ವತಿಯಿಂದ ಖರೀದಿಸಲಾಗಿದೆಯಾದರೂ ಚಾಲಕರ ಕೊರತೆಯಿಂದ ಎಲ್ಲ ಆಟೋಗಳನ್ನು ಬಳಕೆಯಿಂದ ಕೈಬಿಡಲಾಗಿದೆ. ಮೂರು ಚಕ್ರಗಳ ಆಟೋಗಳಲ್ಲಿ ಹೆಚ್ಚಿನ ಕಸ ಸಾಗಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದ 2019ರ ಅಂತ್ಯದಲ್ಲಿ ನಾಲ್ಕು ಚಕ್ರಗಳ 14 ಟೆಂಪೋಗಳನ್ನೂ ಖರೀದಿಸಲಾಯಿತು. ಆದರೆ ಅದರಲ್ಲಿ ಬ್ಯಾಟರಿ ಇಲ್ಲ ಎಂಬ ಕಾರಣಕ್ಕೆ ನಾಲ್ಕನ್ನು ಮೂಲೆಯಲ್ಲಿ ನಿಲ್ಲಿಸಲಾಗಿದೆ.

ಯುಜಿಡಿ ಕಟ್ಟಿಕೊಂಡ ವೇಳೆ ಬಳಸುವ ಸಕ್ಕಿಂಗ್ ಯಂತ್ರವಿದ್ದರೂ ಪದೇ ಪದೆ ಕೆಟ್ಟು ಹೋಗುತ್ತಿರುವ ಪರಿಣಾಮ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ದೊರಕುತ್ತಿಲ್ಲ. ಯಂತ್ರವನ್ನು ಸರಿಯಾಗಿ ರಿಪೇರಿ ಮಾಡಿಸದ ಕಾರಣ ಸಾರ್ವಜನಿಕರು ಖಾಸಗಿಯವರಿಗೆ ಕೇಳಿದಷ್ಟು ದುಬಾರಿ ಬಾಡಿಗೆ ತೆರುವಂತಾಗಿದೆ. ಪದೇ ಪದೆ ಸಮಸ್ಯೆ ಎದುರಾಗುವ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ರಿಪೇರಿ ಹಾಗೂ ಗಿಡಗಂಟಿಗಳ ತೆರವಿಗೆಂದು ಪುರಸಭೆ ಜೆಸಿಬಿ ಖರೀದಿಸಿದೆ. ಆದರೂ ಹಳೆಯ ಕಾಲದ ಈ ಯಂತ್ರದಿಂದ ಸಣ್ಣಪುಟ್ಟ ಕೆಲಸ ಮಾತ್ರ ಮಾಡಲು ಸಾಧ್ಯವಾಗುತ್ತಿದ್ದು, ದೊಡ್ಡ ಕೆಲಸಗಳಿಗೆ ಬಾಡಿಗೆ ಯಂತ್ರಗಳನ್ನೇ ಅವಲಂಬಿಸುವಂತಾಗಿದೆ.

ಅಧಿಕಾರಿಗಳ ನಿರ್ಲಕ್ಷೃದಿಂದ ಕೆಲವು ವಾಹನಗಳು ನಟ್ ಮತ್ತು ಬೋಲ್ಟ್ ಇಲ್ಲದೆ ನಿಂತಿವೆ. ಇದರೊಂದಿಗೆ, ಸರ್ಕಾರದ ಅನುದಾನದಲ್ಲಿ ಖರೀದಿಸಲಾದ 15ಕ್ಕೂ ಹೆಚ್ಚು ವಾಹನಗಳು ಬ್ಯಾಟರಿ ಸಮಸ್ಯೆಯಿಂದ ತುಕ್ಕು ಹಿಡಿಯುತ್ತಿವೆ. ಹೊಸ ವಾಹನಗಳನ್ನು ಖರೀದಿಸಲು ಮುಗಿಬೀಳುವ ಅಧಿಕಾರಿಗಳು ರಿಪೇರಿ ಮಾಡಿಸಲು ಆಸಕ್ತಿ ತೋರಿಸದ ಪರಿಣಾಮ ಕೋಟ್ಯಂತರ ರೂ. ಬೆಲೆಬಾಳುವ ವಾಹನಗಳು ನಿರುಪಯುಕ್ತವಾಗುತ್ತಿವೆ.ನಾಗೇಶ್, ಪುರಸಭೆ ಸದಸ್ಯ ಯಾವುದೇ ವಾಹನಗಳ ರಿಪೇರಿಗೆ ಮನವಿ ಬಂದ ಕೂಡಲೇ ಅದನ್ನು ಪರಿಗಣಿಸಲಾಗುತ್ತಿದೆ. ಆದರೆ ಚಾಲಕ ಮತ್ತು ಸಿಬ್ಬಂದಿ ಕೊರತೆಯಿಂದ ಬಹುತೇಕ ವಾಹನಗಳನ್ನು ಬಳಕೆ ಮಾಡಲು ಆಗುತ್ತಿಲ್ಲ. ಇನ್ನೂ ಹದಿಮೂರು ಚಾಲಕರ ಅವಶ್ಯಕತೆಯಿದ್ದು ನಿಯೋಜನೆ ನಂತರ ಬಳಕೆಗೆ ತರಲಾಗುವುದು. ಬಹುತೇಕ ಎಲ್ಲ ವಾಹನಗಳಿಗೂ ಬ್ಯಾಟರಿ ಹಾಕಿಸಬೇಕಾಗಿದ್ದು ಇದಕ್ಕಾಗಿ ಟೆಂಡರ್ ಕರೆಯಲಾಗುವುದು. ಮೊಬೈಲ್ ಶೌಚಗೃಹಗಳನ್ನು ಇನ್ನೂ ಉದ್ಘಾಟನೆ ಮಾಡದ ಕಾರಣ ಒಮ್ಮೆಯೂ ಬಳಕೆಯಾಗಿಲ್ಲ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net