

ಗುಂಡ್ಲುಪೇಟೆ: ಮಕ್ಕಳ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಎಚ್ಚರಿಕೆ ನೀಡಿದರು.
ತಾಲೂಕಿನ ಯಡವನಹಳ್ಳಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶನಿವಾರ ಭೇಟಿ ನೀಡಿ ವಿದ್ಯಾರ್ಥಿ ಹಾಗೂ ಪಾಲಕರಿಂದ ಮಾಹಿತಿ ಪಡೆದರು. ಕಳೆದ ಭಾನುವಾರ ಮಾಂಸಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿದರು.
ಹಾಸ್ಟೆಲ್‌ನಲ್ಲಿ ಸರಿಯಾಗಿ ಊಟ ತಿಂಡಿ ನೀಡುವುದಿಲ್ಲ. ಆಹಾರ ಸರಬರಾಜು ಗುತ್ತಿಗೆದಾರ ಕಳಪೆ ಗುಣಮಟ್ಟದ ಮಾಂಸ ಸರಬರಾಜು ಮಾಡುತ್ತಿದ್ದಾರೆ. ಹೆಣ್ಣುಮಕ್ಕಳಿದ್ದರೂ ಶೌಚಗೃಹ ಸಮರ್ಪಕ ನೀರು ಸರಬರಾಜು ಮಾಡುತ್ತಿಲ್ಲ. ಬಿಸಿನೀರು ಕೇಳಿದರೂ ಕೊಡುತ್ತಿಲ್ಲ. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬದಲು ಅವರ ಮನೆಗಳಿಗೆ ಕಳಿಸಲಾಗುತ್ತದೆ. ಶಾಲೆಯ ಸುತ್ತಲೂ ಗಿಡಗಂಟಿಗಳು ಬೆಳೆದು ಅಶುಚಿತ್ವ ತಾಂಡವವಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರುಗಳ ಸುರಿಮಳೆಗರೆದರು.
ಶೌಚಗೃಹ, ಅಡುಗೆಮನೆ ಹಾಗೂ ಆವರಣವನ್ನು ಖುದ್ದಾಗಿ ಪರಿಶೀಲಿಸಿದ ಶಾಸಕರು, ಕೂಡಲೆ ಶಾಲೆಯ ಸುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ, ಅಗತ್ಯ ಅನುದಾನ ನೀಡಲಾಗುವುದು. ಮುಂದಿನ 10 ದಿನಗಳಲ್ಲಿ ಎಲ್ಲಾ ಅವ್ಯವಸ್ಥೆಗಳನ್ನೂ ಸರಿಪಡಿಸಿ ಎಂದು ಪ್ರಭಾರ ಪ್ರಾಂಶುಪಾಲ ಕುಮಾರಸ್ವಾಮಿಗೆ ಸೂಚಿಸಿದರು.
ಈ ಸಂದರ್ಭ ತಾಪಂ ಮಾಜಿ ಸದಸ್ಯ ಹೊರೆಯಾಲ ನೀಲಕಂಠಪ್ಪ, ಜಿ.ಪಂ ಮಾಜಿ ಸದಸ್ಯ ನಾಗರಾಜು, ಎಪಿಎಂಸಿ ನಿರ್ದೇಶಕ ಆರ್.ಎಸ್.ನಾಗರಾಜು, ಬಿ.ಎಂ.ಮುನಿರಾಜು ಸೇರಿದಂತೆ ಇತರರು ಇದ್ದರು.