

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ವಿದ್ಯಾರ್ಥಿಗಳಿಗೆ ವರದಾನವಾಗುವ ಜತೆಗೆ ಇತರ ಗ್ರಾಮ ಪಂಚಾಯಿತಿಗಳಿಗೂ ಮಾದರಿಯಾಗುತ್ತಿದೆ.
ಪ್ರಮುಖ ಹೋಬಳಿ ಕೇಂದ್ರವಾದ ಗ್ರಾಮದಲ್ಲಿ 1994 ರಲ್ಲಿ ಗ್ರಂಥಾಲಯ ಪ್ರಾರಂಭವಾಯಿತು. ಮೂಲಸೌಕರ್ಯಗಳ ಕೊರತೆ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಲ್ಲಿ 29 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯವನ್ನು ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹಸ್ತಾಂತರಿಸಲಾಯಿತು.
ಗ್ರಾಮಾಂತರ ಪ್ರದೇಶಗಳ ಜನರಿಗೆ ಪಟ್ಟಣದ ಮಟ್ಟದಲ್ಲಿ ದೊರಕುವ ಸವಲತ್ತುಗಳು ದೊರಕುವಂತೆ ಮಾಡಲು ತೆರಕಣಾಂಬಿ ಗ್ರಾಮದ ಗ್ರಂಥಾಲಯವನ್ನು ಉನ್ನತೀಕರಿಸಲಾಯಿತು. ಹಳೆಯ ಕಟ್ಟಡದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಅಗತ್ಯ ಸೌಲಭ್ಯಗಳನ್ನು ನೀಡಿದ್ದರಿಂದ ಮಹಿಳೆಯರೂ ಗ್ರಂಥಾಲಯಕ್ಕೆ ಬರುವಂತಾಗಿದೆ. ಪ್ರತಿದಿನ ಕನಿಷ್ಠ 100 ನಾಗರಿಕರು, 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಕುಳಿತುಕೊಳ್ಳಲು ಸ್ಥಳಾವಕಾಶವೇ ಇಲ್ಲದಂತಾಗುತ್ತಿದೆ.
ಈ ಗ್ರಂಥಾಲಯದಲ್ಲಿ ಸುಮಾರು 7,500ಕ್ಕೂ ಹೆಚ್ಚಿನ ಪುಸ್ತಕಗಳ ಭಂಡಾರವಿದ್ದು, 300 ವಿದ್ಯಾರ್ಥಿಗಳೂ ಸೇರಿದಂತೆ 550 ಸದಸ್ಯರನ್ನು ಹೊಂದಿದೆ. ಸುತ್ತಮುತ್ತಲಿನ ಗ್ರಾಮಗಳ ಯುವಕರಿಗೆ ಜ್ಞಾನದಾಹ ತಣಿಸುವ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ಪುಸ್ತಕಗಳು, ನಿಯತಕಾಲಿಕಗಳನ್ನು ಕಲ್ಪಿಸುತ್ತಿದೆ.
ಎಲ್ಲ ಸಾಹಿತಿಗಳ ಪುಸ್ತಕ ಲಭ್ಯ: ಸಾಹಿತ್ಯ ಪ್ರೇಮಿಗಳು ಹಾಗೂ ಗೃಹಿಣಿಯರಿಗೆ ಓದಲು ಸದಭಿರುಚಿಯ ಪುಸ್ತಕಗಳಿವೆ. ಜ್ಞಾನಪೀಠ ಪ್ರಶಸ್ತಿ ವಿಜೇತರು ಸೇರಿದಂತೆ ಕನ್ನಡದ ಎಲ್ಲ ಸಾಹಿತಿಗಳ ಕೃತಿಗಳು, ಐತಿಹಾಸಿಕ ಹಾಗೂ ಮಹಾನ್ ಪುರುಷರ ಜೀವನ ಕಥೆಗಳು, ಪತ್ತೇದಾರಿ ಕಾದಂಬರಿಗಳು, ವಿದ್ಯಾರ್ಥಿಗಳ ಜ್ಞಾನ ವೃದ್ಧಿಸಲು ಅಗತ್ಯವಾದ ಕಾಲಕೋಶಗಳ ದೊಡ್ಡ ಸಂಗ್ರಹವೇ ಇದೆ.
ನೂರಾರು ಜನರ ಭೇಟಿ :
ಇಲ್ಲಿನ ಪುಸ್ತಕಗಳನ್ನು ಓದಿದ ನೂರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉತ್ತಮಪಡಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಆತ್ಮಕತೆ ಹಾಗೂ ಜೀವನ ಚರಿತ್ರೆ ಓದಿ ಅದರ ಪ್ರೇರಣೆಯಿಂದ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುತ್ತಿದ್ದಾರೆ. ನೂರಾರು ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಸ್ಥಾನ ಗಳಿಸಿದ್ದಾರೆ. ಪ್ರತಿ ದಿನವೂ ಕನಿಷ್ಠ 100 ರಿಂದ 200 ಜನರು ಭೇಟಿ ನೀಡಿ ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದಾರೆ.
ಗಾಳಿ, ಬೆಳಕಿನ ಕೊರತೆಯಿದ್ದ ಹಿನ್ನೆಲೆಯಲ್ಲಿ ಹಳೆಯ ಕಟ್ಟಡದಿಂದ ಮತ್ತೊಂದು ಸುಸಜ್ಜಿತ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕಂಪ್ಯೂಟರ್ ಅಳವಡಿಸಿ ಇದಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಇಡೀ ಗ್ರಂಥಾಲಯವನ್ನು ಸಂಪೂರ್ಣ ಡಿಜಿಟಲ್ ಮಾಡಲು ಯೋಜನೆ ರೂಪಿಸಲಾಗಿದ್ದು, ಸದ್ಯ ಎರಡು ಕಂಪ್ಯೂಟರ್ ಅಳವಡಿಸಲಾಗಿದೆ. ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಮಟ್ಟದ ನಿಯೋಗ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ತುಂಬಾ ಸರಳವಾಗಿ ನಿರ್ಮಿಸಿದ ಗ್ರಂಥಾಲಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಇನ್ನೂ ಹಲವಾರು ಗ್ರಾಮಪಂಚಾಯಿತಿಗಳು ಇದನ್ನು ಅನುಸರಿಸುತ್ತಿವೆ. ಸದ್ಯ ತಾಲೂಕಿನ 34 ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಭೇಟಿ ನೀಡಿ ಇದರ ಮಾದರಿಯನ್ನು ಗ್ರಂಥಾಲಯಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.
ಶಿಥಿಲಾವಸ್ಥೆ ಕಟ್ಟಡದಲ್ಲಿದ್ದ ಗ್ರಂಥಾಲಯಕ್ಕೆ ಬರಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದರು. ಆದರೆ ಗ್ರಾಮ ಪಂಚಾಯಿತಿಯು ಇದನ್ನು ಹೈಟೆಕ್ ಮಾಡಿದ್ದರಿಂದ ಬೆಳಗಿನಿಂದ ಸಂಜೆಯವರೆಗೂ ಸಾರ್ವಜನಿಕರು ಹಾಗೂ ಮಹಿಳೆಯರು ಆಗಮಿಸಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದು, ಜನರ ಮನ ಗೆದ್ದಿದೆ.-ಮಹದೇವಪ್ರಸಾದ್ ಗ್ರಂಥಪಾಲಕ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವವರಿಗೆ ಗ್ರಂಥಾಲಯ ನೆರವಿಗೆ ಬಂದಿದೆ. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರೂ ತುಂಬಾ ಸಂತೋಷ ಪಡೆದುಕೊಳ್ಳುತ್ತಿದ್ದಾರೆ. ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿ ಜನಪ್ರಿಯವಾಗುತ್ತಿದೆ. ಇದರಿಂದ ನಾನಾ ಗ್ರಾಮ ಪಂಚಾಯಿತಿಗಳ ಸದಸ್ಯರು ಭೇಟಿ ನೀಡಿ ಮಾಹಿತಿ ಪಡೆದು ತಮ್ಮ ವ್ಯಾಪ್ತಿಯ ಗ್ರಂಥಾಲಯಗಳಲ್ಲಿಯೂ ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ.-ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.