

ಗುಂಡ್ಲುಪೇಟೆ: ಗುಂಡ್ಲು ನದಿಗೆ ಅಂತರ್ಗಾಮಿಯಾಗಿ ನೀರು ಹರಿಯುವ ತಾಲೂಕಿನ ಸ್ಕಂದಗಿರಿ ಪಾರ್ವತಾಂಬ ಬೆಟ್ಟದ ತಪ್ಪಲಿನ ಅಪೂರ್ವ ಜೀವರಾಶಿ ಹೊಂದಿರುವ ಒಂಟಿಗುಡ್ಡದಲ್ಲಿ ಮತ್ತೆ ಗಣಿಗಾರಿಕೆ ಆರಂಭಿಸಲು ಸದ್ದಿಲ್ಲದೆ ಸಿದ್ಧತೆ ನಡೆಸಿರುವುದು ಸುತ್ತಮುತ್ತಲಿನ ಗ್ರಾಮಸ್ಥರ ಹಾಗೂ ತಾಲೂಕಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗುಡ್ಡದಲ್ಲಿ ಗಣಿಗಾರಿಕೆ ನಡೆಸುವ ಸಲುವಾಗಿ ಮಣ್ಣು ತೆಗೆಯುವುದು, ಬಂಡೆ ಸೀಳುವುದು ಮುಂತಾದ ಚಟುವಟಿಕೆ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರ ಒತ್ತಾಯದ ಮೇರೆಗೆ ಭಾನುವಾರ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಣ್ಣು ಸಾಗಣೆಯಲ್ಲಿ ತೊಡಗಿದ್ದ ಟ್ರ್ಯಾಕ್ಟರ್ ಹಾಗೂ ಜೆಸಿಬಿಯನ್ನು ಹಿಂದಕ್ಕೆ ಕಳುಹಿದ್ದಾರೆ.
ಅಪೂರ್ವ ಜೀವಸಂಕುಲ ತಾಣ: ಕಂದೇಗಾಲ, ಮೊಳ್ಳಯ್ಯನಹುಂಡಿ, ಶಿಂಡನಪುರ ಕಗ್ಗಳದಹುಂಡಿ ನಡುವೆ ಇರುವ ಒಂಟಿಗುಡ್ಡ ಅಪೂರ್ವ ಜೀವಸಂಕುಲವನ್ನು ಹೊಂದಿದೆ. ಹಿಂದಿನಿಂದಲೂ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಸಮೃದ್ಧ ಮೇವು ನೀಡುತ್ತಿರುವ ಗುಡ್ಡದ ಪೊಟರೆ ಹಾಗೂ ಬಂಡೆಗಳಲ್ಲಿ ನೂರಾರು ಸಂಖ್ಯೆಯ ಜೇನುಗೂಡುಗಳಿದ್ದು ಸೂರ್ಯಕಾಂತಿ ಮುಂತಾದ ಬೆಳೆಗಳಿಗೆ ಪರಾಗಸ್ಪರ್ಶ ಮಾಡುವ ಮೂಲಕ ರೈತರು ಬೆಳೆದ ಬೆಳೆಗಳ ಇಳುವರಿ ಹೆಚ್ಚಳಕ್ಕೆ ಸಹಾಯಕವಾಗಿವೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಂಡುಬರುವ ಆನೆಹುಲ್ಲು ಹಾಗೂ ಗುಲಗಂಜಿ ಮುಂತಾದ ಸಸ್ಯ ಸಂಕುಲಗಳು, ಪುನಗುಬೆಕ್ಕು, ಕಾಡುಬೆಕ್ಕು, ನವಿಲುಗಳು ಮುಂತಾದ ಜೀವಸಂಕುಲಗಳಿವೆ. ಬೇಸಿಗೆಯಲ್ಲೂ ಗುಡ್ಡದ ನೆತ್ತಿಯ ಮೇಲೆ ನೀರು ದೊರಕುತ್ತಿದ್ದ ಪರಿಣಾಮ ವನ್ಯಜೀವಿಗಳು ನಾಡಿನತ್ತ ಬರದೆ ಅಲ್ಲಿಯೇ ನೆಲೆಸಿದ್ದವು.
ಬತ್ತಿಹೋದವು ಜಲಮೂಲಗಳು:
ಪಾರ್ವತಿ ಬೆಟ್ಟಕ್ಕೆ ಹೊಂದಿಕೊಂಡಿರುವ ಗುಡ್ಡದಲ್ಲಿ 2014ರಲ್ಲಿ ಗಣಿಗಾರಿಕೆ ಆರಂಭಿಸಲಾಯಿತು. ಸಿಕ್ಕಸಿಕ್ಕಲ್ಲಿ ಡೈನಾಮೈಟ್ ಸಿಡಿಸಿ ದೊಡ್ಡ ದೊಡ್ಡ ಬಂಡೆಗಳನ್ನು ಒಡೆಯುವ ಜತೆಗೆ ಬೆಟ್ಟದ ನೆತ್ತಿಯ ಮೇಲಿದ್ದ ದೋಣಿಬಂಡೆಯನ್ನು ಸಿಡಿಸಿದ್ದರಿಂದ ವರ್ಷಪೂರ್ತಿ ನೀರು ಕೊಡುತ್ತಿದ್ದ ಜಲಮೂಲಗಳು ಬತ್ತಿಹೋದವು. ಗುಡ್ಡದಲ್ಲಿ ನೆಲೆಸಿದ್ದ ಜೇನು ಮುಂತಾದ ವನ್ಯಜೀವಿಗಳು ದಿಕ್ಕಾಪಾಲಾದವು. ಅಲ್ಲದೆ, ಪಾರ್ವತಿ ಬೆಟ್ಟದಲ್ಲಿ ವರ್ಷದ ಎಲ್ಲ ದಿನಗಳಲ್ಲೂ ನೀರು ತುಂಬಿರುತ್ತಿದ್ದ ಕಲ್ಯಾಣಿಯೂ ನೀರಿಲ್ಲದೆ ಬತ್ತಿಹೋಗಿತ್ತು. ಇದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರು ಹಾಗೂ ಕೃಷಿಗೆ ಬೇಕಾದ ನೀರು ದೊರಕದೆ ಹಾಹಾಕಾರವುಂಟಾಗಿ ಜನ-ಜಾನುವಾರುಗಳು ವಲಸೆ ಹೋಗುವಂತಾಗಿತ್ತು. ಇದರಿಂದ ಬೇಸತ್ತ ಸುತ್ತಮುತ್ತಲಿನ ಗ್ರಾಮಗಳ ಜನತೆ ಪ್ರತಿಭಟನೆ ನಡೆಸಿ ಗಣಿಗಾರಿಕೆಯನ್ನು ನಿಲ್ಲಿಸಿದ್ದರು.
ಹೆಚ್ಚಿದ ಅಂತರ್ಜಲ ಮಟ್ಟ:
ಕಳೆದ ಆರೇಳು ವರ್ಷಗಳಿಂದ ಗಣಿಗಾರಿಕೆ ನಿಂತಿದ್ದರಿಂದ ಈ ಭಾಗದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಕಡಿಮೆಯಾಗುವ ಜತೆಗೆ, ಅಂತರ್ಜಲ ಮಟ್ಟದಲ್ಲಿಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇತ್ತೀಚೆಗೆ ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಿದ್ದರಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿಯೂ ನೀರು ಉಕ್ಕಿ ಹರಿಯುವಂತಾಗಿದ್ದು ಪ್ರತಿ ವರ್ಷವೂ ಕಾಡುತ್ತಿದ್ದ ನೀರಿನ ಕೊರತೆ ನೀಗಿದೆ.
ಬಂಡೀಪುರಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಕುಂದಕೆರೆ ಹಾಗೂ ಗೋಪಾಲಸ್ವಾಮಿ ಬೆಟ್ಟ ವಲಯಗಳಿಂದ ಹೊರಬಂದ ಹುಲಿಗಳು ಬಫರ್ ವಲಯ ಹಾಗೂ ಬಫರ್ ವಲಯದ ಅಂಚಿನಲ್ಲಿರುವ ಒಂಟಿ ಗುಡ್ಡದಲ್ಲಿ ನೆಲೆಸಿವೆ. ಆದರೆ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಮಣ್ಣು ತೆಗೆದು ಟ್ರ್ಯಾಕ್ಟರ್‌ಗಳಲ್ಲಿ ಸಾಗಣೆ ಮಾಡಲಾಗುತ್ತಿದೆ. ಪ್ರತಿ ದಿನವೂ ಜೆಸಿಬಿಗಳಿಂದ ಭೂಮಿಯಲ್ಲಿರುವ ಮಣ್ಣನ್ನು ಹೊರತೆಗೆದು ಪ್ರತಿ ಟ್ರ್ಯಾಕ್ಟರಿಗೆ ಒಂದರಿಂದ ಒಂದೂವರೆ ಸಾವಿರ ರೂ.ಗಳಿಗೆ ಮಾರಾಟ ಮಾಡುವ ಹಾಗೂ ಕಲ್ಲು ಬಂಡೆಗಳನ್ನು ಸಿಡಿಸುವ ಮೂಲಕ ಗಣಿಗಾರಿಕೆ ನಡೆಸಲಾಗುತ್ತಿದೆ.
ವಶಕ್ಕೆ ತೆಗೆದುಕೊಳ್ಳಲು ಒತ್ತಾಯ:
ಕಾಡಂಚಿನ ಜಮೀನುಗಳಲ್ಲಿ ಜಾನುವಾರುಗಳನ್ನು ಮೇಯಲು ಅಡ್ಡಿಪಡಿಸುವ ಅರಣ್ಯ ಇಲಾಖೆ ಇಂತಹ ಪರಿಸರ ಸೂಕ್ಷ್ಮ ಜೀವಸಂಕುಲ ಹೊಂದಿರುವ ಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿರುವುದು ವಿಪರ್ಯಾಸ. ಆದ್ದರಿಂದ ಬಫರ್ ವಲಯದ ಅಂಚಿನಲ್ಲಿರುವ ಗುಡ್ಡವನ್ನು ಕೂಡಲೇ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದು ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಮುಂದಾಗಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಹುಲಿಗಳಿಗೆ ಆವಾಸ ಸ್ಥಾನದ ಕೊರತೆ
ಇತ್ತೀಚೆಗೆ ಹುಲಿಗಳ ಸಂತತಿ ಹೆಚ್ಚಾಗುತ್ತಿದ್ದು ಬಂಡೀಪುರದಲ್ಲಿ ಅವುಗಳಿಗೆ ಆವಾಸ ಸ್ಥಾನದ ಕೊರತೆಯಾಗುತ್ತಿದೆ. ವಯಸ್ಸಾದ ಇಲ್ಲವೇ, ಮರಿಹುಲಿಗಳು ಬಫರ್ ಹಾಗೂ ಸುತ್ತಮುತ್ತಲಿನ ಗುಡ್ಡಗಳಲ್ಲಿ ಆವಾಸ ಸ್ಥಾನ ಕಂಡುಕೊಳ್ಳುತ್ತಿವೆ. ಕಳೆದ ನಾಲ್ಕು ವರ್ಷಗಳ ಹಿಂದೆ ಗುಡ್ಡದಲ್ಲಿ ನೆಲೆಸಿದ್ದ ಒಂದು ಹುಲಿ ಹಾಗೂ ಚಿರತೆಯನ್ನು ವಿಷಪ್ರಾಶನದಿಂದ ಕೊಲ್ಲಲಾಗಿತ್ತು. ಕಳೆದ ಬಾರಿ ಹುಲಿ ಗಣತಿ ಸಂದರ್ಭದಲ್ಲಿ ಕ್ಯಾಮರಾ ಅಳವಡಿಸಿದ್ದಾಗ ಭೀಮನಬೀಡು ಗುಡ್ಡದಲ್ಲಿ ಒಮ್ಮೆಗೆ ಎರಡು, ನಂತರ ಮತ್ತೊಂದು ಹುಲಿ ಪ್ರತ್ಯೇಕವಾಗಿ ಸಂಚರಿಸಿರುವ ದೃಶ್ಯ ಸೆರೆಯಾಗಿದೆ. ಪಾರ್ವತಿ ಬೆಟ್ಟ, ತ್ರಿಯಂಭಕಪುರ ಹಾಗೂ ಒಂಟಿಗುಡ್ಡದಲ್ಲಿ ಎರಡು ವಯಸ್ಕ ಹಾಗೂ ಎರಡು ಮರಿ ಹುಲಿಗಳು ಮತ್ತು ನಾಲ್ಕು ಚಿರತೆಗಳ ಸಂಚಾರ ಕಂಡುಬಂದಿದೆ. ಗುಡ್ಡಪ್ರದೇಶಗಳು, ದೇಪಾಪುರ, ಶೀಲವಂತಪುರ ಹುಲಿಗಿನ ಮೊರಡಿ ವೆಂಕಟರಮಣಸ್ವಾಮಿ ಬೆಟ್ಟಗಳಲ್ಲಿಯೂ ಹುಲಿಗಳು ಹಾಗೂ ಚಿರತೆಗಳು ಸಂಚರಿಸುತ್ತಿವೆ. ಆದರೆ ಇಲ್ಲಿಯವರೆಗೆ ಕಾಡುಹಂದಿಗಳು ಹಾಗೂ ಜಾನುವಾರುಗಳನ್ನು ಕೊಂದು ತಿನ್ನುತ್ತಿವೆಯೇ ಹೊರತು ಎಲ್ಲಿಯೂ ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಆದರೆ ಗಣಿಗಾರಿಕೆ ಆರಂಭವಾದರೆ ಮತ್ತೊಮ್ಮೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಲಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ
ಹಿಂದೆ ಒಂಟಿಗುಡ್ಡವನ್ನು ಬಫರ್ ವಲಯಕ್ಕೆ ಸೇರಿಸಲು ಮುಂದಾಗಿಲ್ಲ. ಅಲ್ಲಿ ಅಪೂರ್ವ ವನ್ಯಜೀವ ಸಂಕುಲಗಳು ನೆಲೆಸಿರುವುದರಿಂದ ಗಣಿಗಾರಿಕೆಯಿಂದ ತೊಂದರೆಗೊಳಗಾಗಲಿವೆ. ಆದ್ದರಿಂದ ಇದನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಯ ವಶಕ್ಕೆ ಪಡೆಯಬೇಕಾದ ಅಗತ್ಯವಿದೆ.-ಎನ್.ಪಿ. ನವೀನ್‌ಕುಮಾರ್, ಬಫರ್ ವಲಯದ ಆರ್‌ಎಫ್‌ಒ ಪಾರ್ವತಿ ಬೆಟ್ಟದ ತಪ್ಪಲಿನಲ್ಲಿರುವ ಒಂಟಿಗುಡ್ಡದಲ್ಲಿ ಗಣಿಗಾರಿಕೆ ನಡೆಸುವುದರಿಂದ ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾಗುವ ಸಂಭವವಿದೆ. ಆದ್ದರಿಂದ ಅಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ.ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕ