

ಗುಂಡ್ಲುಪೇಟೆ: ಕಳೆದ ಒಂದು ವಾರದಿಂದ ಬಂಡೀಪುರ ಅರಣ್ಯಕ್ಕೆ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಕಾಡಂಚಿನ ಕೆರೆಗಳು ತುಂಬಿ ಹರಿಯುತ್ತಿದ್ದು ಹಂಗಳ ಹಿರಿಕೆರೆ ಹಾಗೂ ಕಮರಹಳ್ಳಿ ಕೆರೆಗಳು ಎರಡೆರಡು ಬಾರಿ ಕೋಡಿ ಬಿದ್ದಿವೆ.
ಕಳೆದ ಕೆಲವು ದಿನಗಳಿಂದ ಗೋಪಾಲಸ್ವಾಮಿಬೆಟ್ಟ, ಕುಂದಕೆರೆ, ಓಂಕಾರ್, ಮದ್ದೂರು, ಮೂಲೆಹೊಳೆ ಮುಂತಾದ ಅರಣ್ಯ ಪ್ರದೇಶಗಳಿಗೆ ಉತ್ತಮ ಮಳೆ ಬೀಳುತ್ತಿದ್ದು ಅರಣ್ಯ ಪ್ರದೇಶದಿಂದ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಗೋಪಾಲಸ್ವಾಮಿ ಬೆಟ್ಟದ ತಪ್ಪಲು, ಮದ್ದೂರು ಅರಣ್ಯ ಹಾಗೂ ಓಂಕಾರ್ ವಲಯಗಳಿಗೆ ಜೋರಾಗಿ ಮಳೆಬಿದ್ದ ಪರಿಣಾಮ ಹಳ್ಳಕೊಳ್ಳಗಳಲ್ಲಿ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಹಂಗಳದ ಹಿರೀಕೆರೆ, ಬೇರಂಬಾಡಿ ಕೆಂಪುಸಾಗರ ಕೆರೆ, ಮಲ್ಲಯ್ಯನಪುರ ಕೆರೆ, ಬರಗಿ ಕೆರೆ, ದೇವಲಾಪುರ ಕೆರೆ, ರಾಘವಾಪುರ ಕೆರೆ ಕೋಡಿ ಬಿದ್ದು ಮುಂದಿನ ಕೆರೆಗಳಿಗೆ ದೊಡ್ಡ ಪ್ರಮಾಣದ ನೀರು ಹರಿದು ಹೋಗುತ್ತಿದೆ.
ಉಕ್ಕಿ ಹರಿದ ಕೆರೆಕಟ್ಟೆಗಳು:
ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಗ್ರಾಮದ ಕೆರೆ ತುಂಬಿ ಕೋಡಿ ಸರಿಯಿಲ್ಲದ ಕಾರಣದ ಏರಿಯ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು ಒಡೆಯುವ ಆತಂಕ ಸೃಷ್ಟಿಯಾಗಿದೆ. ಕುಂದಕೆರೆ ವಲಯದಲ್ಲಿ ಬಿದ್ದ ಮಳೆಗೆ ಕಾಡಂಚಿನ ಕೆರೆಗಳು ಉಕ್ಕಿ ಹರಿಯುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಸವರ್ಪಕ ಪ್ರಮಾಣದಲ್ಲಿ ಮಳೆ ಬೀಳದೆ ಬತ್ತಿಹೋಗಿದ್ದ ಕುಂದಕೆರೆ ಕೆರೆ ಒಂದೇ ದಿನದಲ್ಲಿ ತುಂಬಿಕೊಂಡು ಕೋಡಿ ಬಿದ್ದಿದೆ.
ಎರಡೆರಡು ಬಾರಿ ಕೋಡಿ ಬಿದ್ದ ಕೆರೆಗಳು: ಹಂಗಳದ ಹಿರೀಕೆರೆ, ಕೆಂಪುಸಾಗರ ಕೆರೆ, ಬರಗಿ ಕೆರೆ, ಕಮರಹಳ್ಳಿ ಕೆರೆ, ದೇವಲಾಪುರ ಕೆರೆ, ರಾಘವಾಪುರ ಕೆರೆ, ಮಲ್ಲಯ್ಯನಪುರ ಕೆರೆಗಳು ಎರಡೆರಡು ಬಾರಿ ಕೋಡಿ ಬಿದ್ದು ಭಾರಿ ಪ್ರಮಾಣದ ನೀರು ಹೊರಗೆ ಹರಿಯುತ್ತಿದೆ.
ಹಿರಿಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಆ ನೀರು ಕಾಲುವೆಗಳ ಮೂಲಕ ಬತ್ತಿ ಹೋಗಿದ್ದ ಹಂಗಳ ದೊಡ್ಡಕೆರೆಗೆ ಸೇರುತ್ತಿದೆ. ಹಂಗಳ ಹೋಬಳಿಯ ಪ್ರಮುಖ ಜಲಮೂಲವಾದ ಹಿರಿಕೆರೆ ಕೆರೆ ಎರಡನೇ ಬಾರಿಗೆ ಕೋಡಿ ಬಿದ್ದಿರುವುದು ಈ ಭಾಗದ ರೈತರಿಗೆ ಸಂತಸ ತಂದಿದೆ.
ನದಿ ನೀರು ತುಂಬಿಸಲು ಒತ್ತಾಯ:
ನಿರಂತರ ಮಳೆಯಿಂದ ಹಲವಾರು ಕೆರೆ ಕಟ್ಟೆಗಳು ತುಂಬಿದ್ದರೂ ಅಲ್ಲಲ್ಲಿ ಇನ್ನೂ ಹಲವಾರು ಕೆರೆಗಳಿಗೆ ನೀರು ಬರದೆ ಆಯಾ ಭಾಗದಲ್ಲಿ ಅಂತರ್ಜಲ ಸಮಸ್ಯೆ ಇನ್ನೂ ಕಾಡುತ್ತಿದೆ. ಹಂಗಳ ಹೋಬಳಿಯ ದೇವರಹಳ್ಳಿ ಕೆರೆ, ಮಳವಳ್ಳಿ, ಗರಗನಹಳ್ಳಿ ಕೆರೆ, ವಡ್ಡಗೆರೆ, ಕರಕಲಮಾದಹಳ್ಳಿ, ದಾರಿ ಬೇಗೂರು, ಯರಿಯೂರು, ಕೊಡಸೋಗೆ, ಬೊಮ್ಮಲಾಪುರ, ಕಲ್ಲುಕಟ್ಟೆಹಳ್ಳ ಜಲಾಶಯ, ವಿಜಯಪುರ ಅಮಾನಿ ಕೆರೆ, ನಲ್ಲೂರು ಅಮಾನಿ ಕೆರೆಗಳು ಇನ್ನೂ ಖಾಲಿಯಾಗಿದೆ. ಆದ್ದರಿಂದ ಗಾಂಧಿ ಗ್ರಾಮ ಏತ ನೀರಾವರಿ ಯೋಜನೆಯಲ್ಲಿ ಬೇಗೂರು ಹಾಗೂ ಆಲಂಬೂರು ಏತ ನೀರಾವರಿ ಯೋಜನೆಯಲ್ಲಿ ತೆರಕಣಾಂಬಿ ಹೋಬಳಿ ಕೆರೆಗಳಿಗೆ ನದಿ ಮೂಲದಿಂದ ನೀರು ಹರಿಸಿದರೆ ಎಲ್ಲ ಕೆರೆಗಳೂ ತುಂಬುತ್ತವೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ನದಿ ಮೂಲದಿಂದ ನೀರು ತುಂಬಿಸುವಂತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ.
ನೀರಾವರಿ ಇಲಾಖೆಗೆ ಸೇರಿದ ಕೆಲವು ದೊಡ್ಡ ಕೆರೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕೆರೆಗಳೂ ತುಂಬಿಕೊಂಡಿವೆ. ನದಿ ಮೂಲದಿಂದ ನೀರು ತುಂಬಿಸುವ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರಾಯೋಗಿಕ ಪರೀಕ್ಷೆ ಕೈಗೊಂಡಿದ್ದಾರೆ.ಟಿ.ರಮೇಶ್‌ಬಾಬು, ತಹಸೀಲ್ದಾರ್, ಗುಂಡ್ಲುಪೇಟೆ