ವಿಜೃಂಭಣೆಯ ಬಸವೇಶ್ವರ ದೇವರ ಉತ್ಸವ

13-G.PT-1 A-Muduguru
Published on

ಗುಂಡ್ಲುಪೇಟೆ : ತಾಲೂಕಿನ ಮೂಡಗೂರು ಗ್ರಾಮದಲ್ಲಿ ವಿಜಯದಶಮಿ ದಿನದಂದು ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಗ್ರಾಮದೇವತೆ ಶ್ರೀ ಬಸವೇಶ್ವರ ದೇವರ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ವಿಜಯ ದಶಮಿಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬ ದೇವಸ್ಥಾನ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು, ತೋರಣ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆ ಹಿನ್ನೆಲೆಯಲ್ಲಿ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೂಡಗೂರು ಮಠದ ಪೀಠಾಧ್ಯಕ್ಷ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಪಾಲ್ಗೊಂಡಿದ್ದರು.

ಖಡ್ಗಗಳನ್ನು ಹಿಡಿದ ಮಕ್ಕಳು ಶ್ರೀ ಬಸವೇಶ್ವರರ ಉತ್ಸವ ಮೂರ್ತಿ ಮೆರವಣಿಗೆಯೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಬನ್ನಿಮರಕ್ಕೆ ಪ್ರಾರ್ಥನೆ, ಪೂಜೆ ಸಲ್ಲಿಸುವುದರೊಂದಿಗೆ ವಿಜಯೋತ್ಸವವನ್ನು ಆಚರಣೆ ಮಾಡಿದರು. ಮಂಗಳವಾದ್ಯ ಮತ್ತು ವೀರಗಾಸೆಯೊಂದಿಗೆ ಉತ್ಸವ ಮೂರ್ತಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಗ್ರಾಮದ ಯುವಕರು, ಮುಖಂಡರು ಕತ್ತಿ ವರಸೆ, ನೃತ್ಯದೊಂದಿಗೆ ಕುದುರೆಯನ್ನು ಮೆರವಣಿಗೆಯಲ್ಲಿ ಕರೆತಂದು ದೇವಾಲಯದ ಮುಂಭಾಗದಲ್ಲಿ ಖಡ್ಗ ಹಿಡಿದಿದ್ದ ಮಕ್ಕಳಿಗೆ ಆರತಿ ಬೆಳಗುವುದರೊಂದಿಗೆ ದೇವತಾ ಕಾರ್ಯವನ್ನು ಸಂಪನ್ನಗೊಳಿಸಿದರು. ಅಕ್ಕಪಕ್ಕದ ಗ್ರಾಮಗಳ ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net