

ಗುಂಡ್ಲುಪೇಟೆ: ಪಟ್ಟಣದ ಎಂಡಿಸಿಸಿ ಬ್ಯಾಂಕ್ ಬಳಿ ತೆಗೆದಿರುವ ಗುಂಡಿ ಮುಚ್ಚದ ಪರಿಣಾಮ ಬುಧವಾರ ಪಡಿತರ ತುಂಬಿಕೊಂಡು ಗೋದಾಮಿಗೆ ಹೋಗುತ್ತಿದ್ದ ಲಾರಿ ಮಗುಚಿ ಬಿದ್ದಿದೆ.
ಕೆಲವು ವಾರಗಳ ಹಿಂದೆ ಪೈಪ್ ಅಳವಡಿಸಲು ಜೆಸಿಬಿಯಿಂದ ಹಳ್ಳ ತೆಗೆದಿದ್ದರೂ ಇದನ್ನು ಇನ್ನೂ ಮುಚ್ಚಿಲ್ಲ. ಬುಧವಾರ ಬಿದ್ದ ಮಳೆಯ ನೀರು ಗುಂಡಿಯನ್ನು ಮುಚ್ಚಿದ್ದರಿಂದ ಗುಂಡಿ ಇರುವ ಬಗ್ಗೆ ಅರಿವಿಲ್ಲದ ಲಾರಿ ಚಾಲಕ ಈ ಮಾರ್ಗದಲ್ಲಿ ಸಾಗುವಾಗ ಲಾರಿ ಎಡಕ್ಕೆ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವುಂಟಾಗಿಲ್ಲ. ನಿನ್ನೆಯೂ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಸ್ವಲ್ಪ ಅಂತರದಲ್ಲಿ ಪಾರಾಗಿತ್ತು.
ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಪಟ್ಟಣದ ರಸ್ತೆಗಳು ವಾಹನಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಪೈಪ್ ಅಳವಡಿಸುವ ಸಲುವಾಗಿ ಪಟ್ಟಣದ ಎಲ್ಲ ರಸ್ತೆಗಳ ಬದಿಗಳು ಹಾಗೂ ಮಧ್ಯದಲ್ಲಿ ಅಗೆದ ಗುಂಡಿಗಳಿಗೆ ಡಾಂಬರು ಹಾಕದೆ ಮಣ್ಣು ಮುಚ್ಚಲಾಗಿದೆ. ಅಲ್ಲದೆ ರಸ್ತೆ ಬದಿಗಳಲ್ಲಿ ದೊಡ್ಡ ದೊಡ್ಡ ಪೈಪ್ ಅಳವಡಿಸುವ ಸಲುವಾಗಿ ಜೆಸಿಬಿಗಳಿಂದ ತೆಗೆದಿರುವ ಹಳ್ಳಗಳನ್ನು ಮುಚ್ಚದೆ ಹಾಗೆಯೇ ಬಿಡಲಾಗಿದೆ. ಇದರಿಂದ ರಾತ್ರಿ ವೇಳೆ ಸಂಚರಿಸುವ ವಾಹನಗಳ ಚಾಲಕರಿಗೆ ಗುಂಡಿಗಳ ಅರಿವಿಲ್ಲದೆ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ರಸ್ತೆ ಬದಿಯ ಹಳ್ಳಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.