ಅರಣ್ಯ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ

Published on

ಗುಂಡ್ಲುಪೇಟೆ: ಅರಣ್ಯ ಸಂರಕ್ಷಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಸರ್ಕಾರ ಹಾಗೂ ಸಾರ್ವಜನಿಕರ ಬೆಂಬಲ ತುಂಬಾ ಅಗತ್ಯವಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ 70ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅರಣ್ಯ ಸಂರಕ್ಷಣೆಯಲ್ಲಿ ತೊಡಗಿದ ಸಿಬ್ಬಂದಿ ತಮ್ಮ ಶ್ರಮ, ಸಮಯ ಹಾಗೂ ದೈಹಿಕ ಶಕ್ತಿಯನ್ನು ಪೂರ್ಣಪ್ರಮಾಣದಲ್ಲಿ ಬಳಸುತ್ತಿರುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದ ಮೇಲೆ ತುಂಬಾ ಒತ್ತಡಗಳು ಬೀಳುತ್ತಿದ್ದು ಇದನ್ನು ಎದುರಿಸಿ ಅರಣ್ಯ ಸಂರಕ್ಷಣೆ ಮಾಡುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಾಗಿರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಸದ್ಯದಲ್ಲೇ ಬಂಡೀಪುರಕ್ಕೆ ಭೇಟಿ ನೀಡುವಂತೆ ಅರಣ್ಯ ಸಚಿವರನ್ನು ಆಹ್ವಾನಿಸಲಾಗಿದ್ದು ಸಿಬ್ಬಂದಿ ಹಾಗೂ ಅರಣ್ಯ ಸಂರಕ್ಷಣೆಗೆ ಅಗತ್ಯವಾದ ಎಲ್ಲ ನೆರವು ಒದಗಿಸಲಾಗುವುದು ಎಂದರು.

ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಮಾತನಾಡಿ, ವರ್ಷಪೂರ್ತಿ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿಯ ಸಾಮರ್ಥ್ಯ ಪ್ರದರ್ಶನವಾಗುವ ಜತೆಗೆ ಮನರಂಜನೆಯೂ ಸಿಗುತ್ತದೆ. ಅಧಿಕಾರಿಗಳ ಜತೆ ಆಟವಾಡುವುದರಿಂದ ಕ್ರೀಡಾ ಮನೋಭಾವನೆ ಬೆಳೆಯಲಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಾಗಿ ಆಯೋಜಿಸಲಾಗುವುದು ಎಂದು ಹೇಳಿದರು.

ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್‌ಕುಮಾರ್, ಸುರೇಶ್, ಸತೀಶ್, ವಲಯ ಅರಣ್ಯಾಧಿಕಾರಿಗಳಾದ ಸತೀಶ್‌ಕುಮಾರ್, ಮಲ್ಲೇಶ್, ಪುನೀತ್‌ಕುಮಾರ್, ನಿಸಾರ್ ಅಹಮದ್, ಎನ್.ಸಿ.ಮಹದೇವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net