ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡು

10-GPT-2
Published on

ಗುಂಡ್ಲುಪೇಟೆ: ದಸರಾ ರಜೆ ಹಿನ್ನೆಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರವಾಸಿಗರು ಕುಟುಂಬ ಸಮೇತರಾಗಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ ಮತ್ತು ಮಧುಮಲೈ ಅರಣ್ಯ ಪ್ರದೇಶಗಳಿಗೆ ತೆರಳುತ್ತಿದ್ದು ಎಲ್ಲ ಪ್ರವಾಸಿ ಕೇಂದ್ರಗಳೂ ಜನರಿಂದ ಗಿಜಿಗುಡುತ್ತಿವೆ. ಕಳೆದೆರಡು ವಾರಗಳಿಂದ ಸಾಧಾರಣ ಪ್ರಮಾಣದ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ಹಸಿರಿನಿಂದ ಕೂಡಿದ ಬಂಡೀಪುರ ಅರಣ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಬಂಡೀಪುರಕ್ಕೆ ಪ್ರತಿದಿನ ಬೆಳಗ್ಗೆಯಿಂದಲೇ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಬೆಳಗ್ಗೆ 7 ರಿಂದ 9 ರವರೆಗೆ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಫಾರಿಗೆ ತೆರಳುತ್ತಿದ್ದಾರೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಡೆ ವನ್ಯಜೀವಿಗಳು ದರ್ಶನ ನೀಡುತ್ತಿದ್ದು ಹಸಿರು ಸೊಬಗಿನ ಜತೆ ಆನೆಗಳ ಹಿಂಡು, ಕಾಡೆಮ್ಮೆ, ಜಿಂಕೆ, ನವಿಲು ಸೇರಿದಂತೆ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದರಿಂದ ಸಫಾರಿ ಕೌಂಟರ್ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಇದೇ ರೀತಿ ಸಂಜೆಯ ಸಫಾರಿಗೆ ತೆರಳಲು ಸಾವಿರಾರು ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಬಂಡೀಪುರ ಸ್ವಾಗತ ಕಚೇರಿ ಮುಂಭಾಗದಲ್ಲಿರುವ ಟಿಕೆಟ್ ಕೌಂಟರ್ ಮುಂದೆ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಮಹಿಳೆಯರೂ ಸೇರಿದಂತೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಬಸ್‌ಗಳನ್ನು ನಿಯೋಜಿಸುತ್ತಿದ್ದರೂ ಬಸ್‌ಗಳಿಗಾಗಿ ಕಿಲೋ ಮೀಟರ್ ಉದ್ದಕ್ಕೂ ಸಾಲಿನಲ್ಲಿ ನಿಂತು ಕಾಯುವಂತಾಗಿದೆ.

ದಸರೆ ರಜೆ ಹಿನ್ನೆಲೆಯಲ್ಲಿ ಬಂಡೀಪುರ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಎಲ್ಲ ಪ್ರವಾಸಿಗರಿಗೂ ಸಫಾರಿ ಹಾಗೂ ಬೆಟ್ಟಕ್ಕೆ ಹೋಗಿಬರಲು ಅವಕಾಶ ಕಲ್ಪಿಸಲಾಗುತ್ತಿದೆ.ಎನ್.ಪಿ.ನವೀನ್ ಕುಮಾರ್, ಬಂಡೀಪುರ ಉಪವಿಭಾಗದ ಎಸಿಎಫ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net