

ಗುಂಡ್ಲುಪೇಟೆ: ತಾಲೂಕಿನ ಯರಿಯೂರು ಅಂಕಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಹಳ್ಳಕ್ಕೆ ನುಗ್ಗಿದೆ.
ಶುಕ್ರವಾರ ತಾಲೂಕಿನ ಉಪಕಾರ ಕಾಲನಿಯಿಂದ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಬಸ್‌ನ ಪ್ಲೇಟ್ ತುಂಡರಿಸಿದ್ದರಿಂದ ಯರಿಯೂರು ಅಂಕಹಳ್ಳಿ ನಡುವೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಹಳ್ಳಕ್ಕೆ ನುಗ್ಗಿದೆ. ಚಾಲಕ ಚಂದ್ರಶೇಖರ್ ಸಮಯಪ್ರಜ್ನೆಯಿಂದ ಭಾರಿ ಅನಾಹುತ ತಪ್ಪಿದೆ. ಈ ವೇಳೆ ಬಸ್ಸಿನಲ್ಲಿ 45 ರಿಂದ 50ರಷ್ಟು ಪ್ರಯಾಣಿಕರಿದ್ದರು.
ಘಟನೆಯಿಂದ ಬಸ್ಸಿನಲ್ಲಿದ್ದ 14 ಜನರಿಗೆ ಪೆಟ್ಟು ಬಿದ್ದಿದ್ದು, ಗಾಯಾಳುಗಳನ್ನು ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಸಣ್ಣಪುಟ್ಟ ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಗಾಯಗಳಾಗಿದ್ದ 6 ಪ್ರಯಾಣಿಕರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸಾರಿಗೆ ಡಿಪೋ ಮೇನೇಜರ್ ತ್ಯಾಗರಾಜು ವಿಜಯವಾಣಿಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಯಾಣಿಕ ಕುಂದಕೆರೆ ಗ್ರಾಮದ ಕುಮಾರ್ ದೂರು ನೀಡಿದ್ದು, ಚಾಲಕ ಚಂದ್ರಶೇಖರ್ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.