ಗುಂಡ್ಲುಪೇಟೆ:ಪಿಕಾರ್ಡ್ ಬ್ಯಾಂಕ್ ರೈತರಿಗೆ ನೀಡಿದ ಬೆಳೆಸಾಲ ಸೇರಿದಂತೆ ಇತರ ಸಾಲಗಳ ಶೇ.73 ವಸೂಲಾತಿ ಮಾಡುವ ಮೂಲಕ ಜಿಲ್ಲೆಯಲ್ಲೇ ನಮ್ಮ ಬ್ಯಾಂಕ್ ಎರಡನೆ ಸ್ಥಾನದಲ್ಲಿದೆ ಎಂದು ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಎಸ್.ಬಸವಣ್ಣ ತಿಳಿಸಿದರು.
ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ 2023-2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ರೈತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಕೃಷಿಕರಿಗೆ ಬೆಳೆಸಾಲ ಹಾಗೂ ಕೃಷಿ ಪರಿಕರಗಳನ್ನು ಖರೀದಿಸಲು ಸಾಲವನ್ನು ನೀಡುತ್ತಾ ಬಂದಿದೆ. ಬ್ಯಾಂಕ್ ತಾನು ನೀಡಿದ್ದ ಸಾಲದ ಪ್ರಮಾಣದಲ್ಲಿ ಶೇ.73 ವಸೂಲಿ ಮಾಡುವ ಮೂಲಕ ಇತ್ತೀಚಿನ ದಿನಗಳಲ್ಲಿ ಉತ್ತಮ ವಹಿವಾಟು ನಡೆಸುತ್ತಿದೆ ಎಂದು ಹೇಳಿದರು.
ಬ್ಯಾಂಕ್‌ಗಳಿಂದ ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಮಾತ್ರ ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಸಾಲ ವಿತರಣೆ ಮಾಡಲು ಗುರಿ ಹೊಂದಲಾಗಿದ್ದು ಮುಂದಿನ ಸಭೆಯಲ್ಲಿ ವಿವರವನ್ನು ಪ್ರಕಟಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷ ಡಿ.ಮಹೇಶ್, ನಿರ್ದೇಶಕರಾದ ಕೊಡಸೋಗೆ ಶಿವಬಸಪ್ಪ, ಎನ್.ಮಲ್ಲೇಶ್, ಎಚ್.ಎಂ.ಮಹೇಶ್, ಬಸವರಾಜು, ದೇವಮ್ಮ, ಕೂಸಯ್ಯ, ಈಶ್ವರಪ್ಪ, ಡಿ.ಎಸ್.ಶಿವಸ್ವಾಮಿ, ನಾಗೇಂದ್ರ, ವ್ಯವಸ್ಥಾಪಕ ಎಂ.ಅನಂದ್, ಸದಸ್ಯರು, ಸಿಬ್ಬಂದಿ ಹಾಜರಿದ್ದರು.