ಗುಂಡ್ಲುಪೇಟೆ: ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿಯಿಂದ ಇರಬೇಕು ಎಂದು ಮೈಸೂರಿನ ಸ್ಪಂದನ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಆರ್. ಭಾರತಿ ಸಲಹೆ ನೀಡಿದರು.
ಗುರುವಾರ ಪಟ್ಟಣದ ಶನೈಶ್ಚರ ದೇವಾಲಯದ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಸದ್ಯ ಐದು ರೀತಿಯ ಕ್ಯಾನ್ಸರ್ ಇದ್ದು, ಒಂದಕ್ಕೆ ಮಾತ್ರ ಚಿಕಿತ್ಸೆ ದೊರಕುತ್ತದೆ. ಉಳಿದ ಮಾದರಿಗಳಲ್ಲಿ ಮುನ್ನೆಚ್ಚರಿಕೆ ಇದ್ದರೆ ಅನುಕೂಲವಾಗುತ್ತದೆ. ಆಧುನಿಕ ತಂತ್ರಜ್ಞಾನದಲ್ಲಿ ತಪಾಸಣೆಗೊಳಗಾದರೆ ರೋಗವನ್ನು ಬೇಗ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವ-ತಪಾಸಣೆ ಮಾಡಿಸಿಕೊಳ್ಳಬೇಕು. ರೋಗದ ಮುನ್ಸೂಚನೆ ಕಂಡುಬಂದರೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ ಮಾತನಾಡಿ, ಯೋಜನೆಯು ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಿ ಎಂದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಬೇಗಂ, ಯೋಜನೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ತಾಲೂಕಿನ ಯೋಜನಾಧಿಕಾರಿ ಚಂದ್ರಶೇಖರ, ಜ್ಞಾನವಿಕಾಸ ಯೋಜನೆಯ ಮಂಜುಳಾ ಸೇರಿದಂತೆ ಹಲವರು ಇದ್ದರು.