ಪದಾರ್ಥಗಳಿಲ್ಲದೆ ಬಿಕೋ ಎನ್ನುತ್ತಿದೆ ಸಂತೆ

05-GPT-1
Published on

ಗುಂಡ್ಲುಪೇಟೆ: ಈ ಬಾರಿ ಸಾಕಷ್ಟು ಮಳೆಯಾಗಿದ್ದರೂ ರೈತರಿಗೆ ಫಸಲು ಸರಿಯಾಗಿ ಕೈಹತ್ತದ ಪರಿಣಾಮ ಸುಗ್ಗಿ ಕಾಲ ಆರಂಭವಾದರೂ ಸಾಕಷ್ಟು ಪದಾರ್ಥಗಳು ಬಾರದೆ ಸಂತೆ ಬಿಕೋ ಎನ್ನುತ್ತಿದೆ.

ಈ ಬಾರಿ ತಾಲೂಕಿನಲ್ಲಿ 11,800 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 1,650 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 9,950 ಹೆಕ್ಟೇರ್ ಭೂಮಿಯಲ್ಲಿ ಸಣ್ಣ ಜೋಳ, 2,290 ಹೆಕ್ಟೇರ್‌ನಲ್ಲಿ ಹತ್ತಿ, 1,250 ಹೆಕ್ಟೇರ್‌ನಲ್ಲಿ ನೆಲಗಡಲೆ ಬಿತ್ತನೆ ಮಾಡಲಾಗಿತ್ತು. ಆದರೆ ಈ ಬಾರಿ ಸ್ವಲ್ಪ ವಿಳಂಬವಾದರೂ ಸಾಕಷ್ಟು ಮಳೆ ಬಿದ್ದಿದ್ದರಿಂದ ಬಿತ್ತನೆ ಮತ್ತು ಬೆಳೆಗಳಿಗೆ ಅನುಕೂಲಕರವಾಗಿತ್ತು. ಆದರೆ ಸುಮಾರು ಎರಡು ತಿಂಗಳ ಕಾಲ ಎಡೆಬಿಡದೆ ಸುರಿದ ಮಳೆಯಿಂದ ಯಾವುದೇ ಬೆಳೆಯೂ ಇಳುವರಿ ಬಾರದಂತಾಗಿದೆ.

ತಾಲೂಕಿಗೆ ವಾಡಿಕೆಯಂತೆ 288 ಮಿಮೀ ಮಳೆ ಬೀಳುತ್ತಿತ್ತು. ಆದರೆ ಈ ಬಾರಿ 326 ಮಿಮೀ ಮಳೆ ಬೀಳುವ ಮೂಲಕ ಶೇ.26 ರಷ್ಟು ಹೆಚ್ಚಾಗಿ ಬಿದ್ದಿದೆ. ಇದರಿಂದ ಸೂರ್ಯಕಾಂತಿ ಕಾಳುಗಳಲ್ಲಿ ಜಳ್ಳು ಹೆಚ್ಚಾಗುವ ಜತೆಗೆ ಎಣ್ಣೆಯ ಅಂಶ ಕಡಿಮೆಯಾಗಿರುವುದರಿಂದ ಸಂತೆಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ 3 ರಿಂದ 4,500 ರೂ.ವರೆಗೆ ಮಾರಾಟವಾಗುತ್ತಿದೆ. ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದರಿಂದ ಹೆಚ್ಚಿನ ರೈತರು ತಮ್ಮ ಮಾಲನ್ನು ಅಲ್ಲಿಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಮುಸುಕಿನ ಜೋಳ ಹಾಗೂ ಜೋಳದ ಇಳುವರಿ ಕಡಿಮೆಯಾಗಿದ್ದರಿಂದ ಮಾರುಕಟ್ಟೆಯ ಸಂತೆಗಳಿಗೆ ಕಡಿಮೆ ಪ್ರಮಾಣದ ಮಾಲು ಬರುತ್ತಿದ್ದು ಸುಗ್ಗಿಯ ಕಾಲದಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದ ಸಂತೆ ಬಿಕೋ ಎನ್ನುತ್ತಿದೆ.

ನೋಂದಣಿ ಆರಂಭ
ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಕ್ವಿಂಟಾಲ್‌ಗೆ 7,280 ರೂ. ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಸದ್ಯ ಪಟ್ಟಣ ಹಾಗೂ ತೆರಕಣಾಂಬಿಯ ಎಪಿಎಂಸಿ ಆವರಣದಲ್ಲಿ ಬೆಳೆಗಾರರ ನೋಂದಣಿ ಮಾಡಲಾಗುತ್ತಿದೆ. ಅರ್ಹ ಬೆಳೆಗಾರರು ತಮ್ಮ ಆಧಾರ್ ಕಾರ್ಡ್, ಆರ್‌ಟಿಸಿ, ಎಫ್‌ಐಡಿ, ಆಧಾರ್ ಲಿಂಕ್ ಆಗಿರುವ ನೋಂದಾಯಿತ ಬ್ಯಾಂಕ್ ಪಾಸ್ ಬುಕ್ ಜತೆ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ.
ಆದರೆ ಬೆಳೆ ಸಮೀಕ್ಷೆ ಹಾಗೂ ಆರ್‌ಟಿಸಿಯಲ್ಲಿ ಸೂರ್ಯಕಾಂತಿ ಎಂದು ನಮೂದಾಗದಿದ್ದರೆ ಅಂತಹ ಬೆಳೆಗಾರರಿಂದ ಸೂರ್ಯಕಾಂತಿ ಖರೀದಿಸುವುದಿಲ್ಲ. ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಬೆಂಬಲ ಬೆಲೆ ಕೇಂದ್ರಕ್ಕೆ ಮಾರಾಟ ಮಾಡಲು ಆಗುತ್ತಿಲ್ಲ. ಆದ್ದರಿಂದ ಸಂತೆಯಲ್ಲಿ ವ್ಯಾಪಾರಿಗಳು ಕೇಳಿದ ಬೆಲೆಗೆ ಮಾರಾಟ ಮಾಡಬೇಕಾಗಿದೆ ಎಂದು ಕಲ್ಲಹಳ್ಳಿಯ ರೈತ ಮಹದೇವಪ್ರಸಾದ್ ಅಲವತ್ತು ಕೊಂಡರು.

ವಯಸ್ಸಾದವರಿಗೆ ಸಮಸ್ಯೆ
60-70 ವರ್ಷ ದಾಟಿದ ಹಿರಿಯರಿಗೆ ಹೆಬ್ಬೆಟ್ಟು ಗುರುತು ಮೂಡದ ಪರಿಣಾಮ ಬಯೋಮೆಟ್ರಿಕ್‌ನಲ್ಲಿ ಸಮಸ್ಯೆ ಎದುರಾಗುತ್ತಿದೆ. ಗುರುವಾರ ಪಟ್ಟಣದ ನೋಂದಣಿ ಕೇಂದ್ರಕ್ಕೆ ಆಗಮಿಸಿದ ಚೌಡಹಳ್ಳಿ ಗ್ರಾಮದ ಮಲ್ಲಿಕಾರ್ಜುನಪ್ಪ ಮತ್ತು ಗುರುನಂಜಮ್ಮ ದಂಪತಿಗೆ ಫಿಂಗರ್ ಪ್ರಿಂಟ್ ಮೂಡಿಬರಲಿಲ್ಲ. 50 ಕ್ವಿಂಟಾಲ್‌ನಷ್ಟು ಸೂರ್ಯಕಾಂತಿ ಬೆಳೆದಿದ್ದರೂ ಯೋಜನೆಯಡಿ ನೋಂದಣಿ ಮಾಡಿಕೊಳ್ಳದಿದ್ದರೆ ಅಡ್ಡಾದಿಡ್ಡಿ ಬೆಲೆಗೆ ಮಾರಾಟ ಮಾಡಬೇಕಾಗಿದೆ. ಬಯೋಮೆಟ್ರಿಕ್ ಅಲ್ಲದೆ ನೋಂದಾಯಿತ ಮೊಬೈಲ್‌ಗಳಿಗೆ ಒಟಿಪಿ, ಫೇಸ್ ರೀಡಿಂಗ್ ಮುಂತಾದ ಪರ್ಯಾಯ ವಿಧಾನಗಳನ್ನು ಅಳವಡಿಸದ ಪರಿಣಾಮ ನೋಂದಣಿ ಸಾಧ್ಯವಾಗದೆ ಹಿರಿಯ ಬೆಳೆಗಾರರು ಹೈರಾಣಾಗುತ್ತಿದ್ದಾರೆ.

52 ರಿಂದ 54 ಗ್ರಾಂನಷ್ಟು ತೂಕ ಬರುತ್ತಿದ್ದ ಸೂರ್ಯಕಾಂತಿ ಕಾಳುಗಳು ಈ ಬಾರಿ ಹೆಚ್ಚಿನ ಮಳೆಯಿಂದಾಗಿ 30 ರಿಂದ 40ಕ್ಕೆ ಇಳಿದಿವೆ. ಪ್ರತಿ ಗ್ರಾಂಗೆ ಒಂದು ರೂ.ನಂತೆ ದರ ನಿಗದಿಸಿ ಸೂರ್ಯಕಾಂತಿ ಖರೀದಿಸಲಾಗುತ್ತಿದೆ.ನಾಗೇಂದ್ರ ವ್ಯಾಪಾರಿ

ಸುಗ್ಗಿ ಸಂದರ್ಭದಲ್ಲಿ ಪ್ರತಿ ವಾರವೂ ಸಂತೆಗೆ 700-800 ಕ್ವಿಂಟಾಲ್ ಸೂರ್ಯಕಾಂತಿ ಬರುತ್ತಿತ್ತು. ಆದರೆ ಈ ಬಾರಿ ಬೆಂಬಲ ಬೆಲೆ ನಿಗದಿ ಪಡಿಸಿದ್ದರಿಂದ 100-150 ಕ್ವಿಂಟಾಲ್ ಮಾತ್ರ ಬಂದಿದೆ. ಉಳಿದ ಬೆಳೆಗಳ ಇಳುವರಿಯೂ ಕಡಿಮೆಯಾಗಿದ್ದರಿಂದ ಮಾರುಕಟ್ಟೆಗಿಂತ ಹೊರಗೆ ಹೆಚ್ಚಿನ ಬೆಳೆಗಳು ಮಾರಾಟವಾಗುತ್ತಿವೆ.ಶ್ರೀಧರ್ ಕಾರ್ಯದರ್ಶಿ, ಎಪಿಎಂಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net