ಗುಂಡ್ಲುಪೇಟೆ: ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಸೆಸ್ಕ್ ಶುಲ್ಕ ವಿಧಿಸಿರುವುದು ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಲಿದೆ ಎಂದು ರೈತ ಸಂಘ-ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಹೇಳಿದರು.
ತಾಲೂಕಿನ ಶೀಗೆವಾಡಿ ಗ್ರಾಮದಲ್ಲಿ ಬುಧವಾರ ರೈತ ಸಂಘ ಹಸಿರು ಸೇನೆಯ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಟಿಸಿ ಅಳವಡಿಕೆಗೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿರುವುದರಿಂದ ರೈತರು ತಮ್ಮ ಬೆಳೆಗಳ ರಕ್ಷಣೆಗೆ ರಸಗೊಬ್ಬರ, ಕೀಟನಾಶಕಗಳನ್ನು ಖರೀದಿ ಮಾಡದ ಪರಿಸ್ಥಿತಿಗೆ ಹೋಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿರುವುದು, ಕೇಂದ್ರ ಸರ್ಕಾರ ಕಡಿಮೆ ಬೆಲೆಗೆ ನೀಡುತ್ತಿದ್ದ ಭಾರತ್ ಅಕ್ಕಿಯನ್ನು ಹಿಂಪಡೆದಿರುವುದು ದುರದೃಷ್ಟಕರ. ಮುಂದಿನ ದಿನಗಳಲ್ಲಿ ಗೃಹಜೋತಿ, ಗೃಹಲಕ್ಷ್ಮಿ, ಉಚಿತ ಬಸ್ ಪ್ರಯಾಣವನ್ನೂ ಸರ್ಕಾರ ಹಿಂದಕ್ಕೆ ಪಡೆಯುವ ಕಾಲ ದೂರವಿಲ್ಲ. ಆದ್ದರಿಂದ ರೈತರು ತಮ್ಮ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಗಳನ್ನು ತಡೆಯಲು ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು. ಸಂಘದ ಜಿಲ್ಲಾಧ್ಯಕ್ಷ ಮಡ್ರಳ್ಳಿ ಮಾದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು, ಜಿಲ್ಲಾ ಉಪಾಧ್ಯಕ್ಷ ಹಾಲಳ್ಳಿ ಮಹೇಶ ಸೇರಿದಂತೆ ಹಲವರು ಇದ್ದರು.