ಗುಂಡ್ಲುಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ

03-GPT-3
Published on

ಗುಂಡ್ಲುಪೇಟೆ: ಕಾಂಗ್ರೆಸ್ ಕಡೆ ಹೋಗಿರುವ ತಮ್ಮ ಪಕ್ಷದ ಪುರಸಭೆ ಸದಸ್ಯರ ವಿರುದ್ಧ ಮಂಗಳವಾರ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿ ಸೆ.4ರಂದು ನಡೆಯುವ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಅಣತಿಯಂತೆ ನಡೆದುಕೊಳ್ಳದಿದ್ದರೆ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿತು.

ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಹಳೇ ಬಸ್ ನಿಲ್ದಾಣದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಪಕ್ಷಾಂತರಿ ಸದಸ್ಯರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ ಪಕ್ಷಾಂತರ ಮಾಡಿದ ಸದಸ್ಯ ಕಿರಣ್‌ಗೌಡ ಮನೆ ಎದುರು ಧರಣಿ ನಡೆಸಿದರು. ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಸಂವಿಧಾನದ ರಕ್ಷಣೆ ಬಗ್ಗೆ ಬೊಬ್ಬೆ ಹೊಡೆಯುವ ಕಾಂಗ್ರೆಸ್‌ನ ಶಾಸಕರು ಸಂವಿಧಾನಕ್ಕೆ ವಿರುದ್ಧವಾಗಿ ಪುರಸಭೆ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಪಟ್ಟಣದ ಪುರಸಭೆಯ 23 ಸ್ಥಾನಗಳಿಗೆ ಬಿಜೆಪಿ 13 ಹಾಗೂ ಕಾಂಗ್ರೆಸ್ ಕೇವಲ 8 ಸ್ಥಾನ ಗಳಿಸಿದ್ದರೂ ಪಕ್ಷೇತರ ಸದಸ್ಯರ ಜತೆಗೆ ಬಿಜೆಪಿಯ ನಾಲ್ವರನ್ನು ಸೆಳೆದು ವಾಮಮಾರ್ಗದಲ್ಲಿ ಅಧಿಕಾರ ಪಡೆಯಲು ಮುಂದಾಗಿದ್ದಾರೆ. ಹಿಂದೆ ದಿ.ಮಹದೇವಪ್ರಸಾದ್ ಶಾಸಕರಾಗಿದ್ದಾಗ ಅವರದೇ ಪಕ್ಷದ ಸದಸ್ಯರು ಬೇರೆ ಪಕ್ಷಕ್ಕೆ ಬೆಂಬಲ ನೀಡಿದಾಗ ಅವರ ಮನೆ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದರು. ಆದರೆ ಅವರ ಪುತ್ರ ಗಣೇಶ್ ಪ್ರಸಾದ್ ತನ್ನ ತಂದೆಯ ಆಶಯಗಳಿಗೆ ವಿರುದ್ಧವಾಗಿ ಅನ್ಯಪಕ್ಷದ ಸದಸ್ಯರ ಬೆಂಬಲದಿಂದ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಜತೆ ಹೋಗಿರುವ ಸದಸ್ಯರು ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇನ್ನೂ ಕಾಲಮಿಂಚಿಲ್ಲ. ನಾಳೆ ಪಕ್ಷದ ನಿರ್ಧಾರದಂತೆ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ, ಪಕ್ಷದ ಆದೇಶ ಉಲ್ಲಂಘಿಸಿ ಕಾಂಗ್ರೆಸ್ ಬೆಂಬಲಿಸಿದ ಸದಸ್ಯರನ್ನು ಯಾವುದೇ ಕಾರಣಕ್ಕೂ ಪುರಸಭೆ ಒಳಗೆ ಹೋಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾಉಪಾಧ್ಯಕ್ಷ ಎಚ್.ಎಸ್.ಸೋಮಶೇಖರ್, ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್, ಪುರಸಭೆ ಸದಸ್ಯ ನಾಗೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವಣ್ಣ, ಯುವಮೊರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ತಾಲೂಕು ಅಧ್ಯಕ್ಷ ಸುನಿಲ್, ಮುಖಂಡರಾದ ಎಚ್.ವಿ.ಮಂಜುನಾಥ್, ಎಸ್.ಸಿ.ಮಂಜುನಾಥ್, ಬಸವರಾಜು, ಮಂಗಳಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net