ಬಂಡೀಪುರದ ಕೆರೆಗಳಿಗೆ ಜೀವ ಕಳೆ

Published on

ಗುಂಡ್ಲುಪೇಟೆ: ಕಳೆದ ಎರಡು ತಿಂಗಳಿಂದ ಬೀಳುತ್ತಿರುವ ಮಳೆಗೆ ಬಂಡೀಪುರ ಅರಣ್ಯ ಹಚ್ಚ ಹಸುರಿನಿಂದ ನಳ ನಳಿಸುತ್ತಿದ್ದು ಕೆರೆ-ಕಟ್ಟೆಗಳು ಕೋಡಿ ಬಿದ್ದು ಹರಿಯುತ್ತಿವೆ. ಪರಿಣಾಮ ಕಾನನ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಬೇಸಿಗೆಯಲ್ಲಿ ಕುಡಿಯುವ ನೀರು ಹಾಗೂ ಮೇವಿಗಾಗಿ ಜಲಮೂಲಗಳನ್ನು ಹುಡುಕಿಕೊಂಡು ವಲಸೆ ಹೋಗಿದ್ದ ವನ್ಯಜೀವಿಗಳು ಹಿಂದಿರುಗಿರುವುದರಿಂದ ಕಾನನದಲ್ಲಿ ಹಿಂಡು ಹಿಂಡಾಗಿ ಸಂಚರಿಸುವ ವನ್ಯಜೀವಿಗಳು ಕಂಡುಬರುತ್ತಿವೆ. ಕೇವಲ ಮೂರು ತಿಂಗಳ ಹಿಂದೆ ಬಿರು ಬಿಸಿಲ ಬೇಗೆಗೆ ಬತ್ತಿ ಹೋಗಿದ್ದ ಕೆರೆ-ಕಟ್ಟೆಗಳು ಮಳೆ ನೀರಿನಿಂದ ಮೈದುಂಬಿವೆ. ಒಣಗಿದ್ದ ಮರ, ಗಿಡಗಳು ಹಸಿರಿನಿಂದ ನಳನಳಿಸುತ್ತಿವೆ. ಗರಿಕೆ ಸಮೃದ್ಧವಾಗಿ ಬೆಳೆದು ವನ್ಯಜೀವಿಗಳಿಗೆ ಆಹಾರದ ಕೊರತೆ ನೀಗಿದೆ.

ತುಂಬಿ ಹರಿವ ಹೊಳೆ, ಕೆರೆ ಕಟ್ಟೆಗಳು: ಬಂಡೀಪುರದಲ್ಲಿ ಸುಮಾರು 375ಕ್ಕೂ ಹೆಚ್ಚು ಕೆರೆಗಳಿದ್ದು ಈ ಬಾರಿ ಹೂಳೆತ್ತಿಸಿ ಮಳೆ ನೀರು ಹರಿದು ಬರುವಂತೆ ಮಾಡಲು ಕಾಲುವೆಗಳನ್ನು ನಿರ್ಮಿಸಿದ್ದರಿಂದ ಎಲ್ಲ ಕೆರೆಗಳೂ ಭರ್ತಿಯಾಗಿವೆ. ಸುಮಾರು ಎರಡು ತಿಂಗಳಿಂದಲೂ ಅರಣ್ಯ ಪ್ರದೇಶಕ್ಕೆ ಎಡಬಿಡದೆ ಸುರಿದ ಮಳೆಯಿಂದ ಎಲ್ಲ ಕೆರೆಗಳೂ ಕೋಡಿ ಬಿದ್ದು ಕಾಲುವೆಗಳಲ್ಲಿ ನೀರು ಹರಿಯುತ್ತಿದೆ. ವೈನಾಡಿನ ಗಡಿಯಲ್ಲಿರುವ ಮೂಲೆಹೊಳೆ ಮಧುಮಲೈ ಗಡಿಯ ಮೋಯಾರ್ ನದಿಗಳು ಭೋರ್ಗರೆದು ಹರಿಯುತ್ತಿದ್ದು, ಈ ಬಾರಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಿವೆ.

ಎಲ್ಲೆಂದರಲ್ಲಿ ವನ್ಯಜೀವಿಗಳ ದರ್ಶನ
ಬಂಡೀಪುರದ ಸಫಾರಿ ಮಾರ್ಗದ ಆರಂಭದಿಂದಲೇ ಒಂದಲ್ಲ ಒಂದು ವನ್ಯಜೀವಿಗಳು ಕಣ್ಣಿಗೆ ಬೀಳುತ್ತಿದ್ದು ಪ್ರವಾಸಿಗರಿಗೆ ಮುದ ನೀಡುತ್ತಿವೆ. ರಸ್ತೆ ಬದಿಗಳಲ್ಲಿ, ಮೈದಾನಗಳಲ್ಲಿ ಜಿಂಕೆ, ಆನೆ ಹಾಗೂ ಕಾಟಿಗಳು ಹಿಂಡು ಹಿಂಡಾಗಿ ಸಂಚರಿಸುತ್ತಿವೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸಫಾರಿಗೆ ಆಗಮಿಸುತ್ತಿದ್ದಾರೆ. ದೊಡ್ಡ ದೊಡ್ಡ ಮರಗಳ ಕೊಂಬೆಗಳ ಮೇಲೆ ಮಲಗಿ ವಿಶ್ರಾಂತಿ ಪಡೆಯುವ ಚಿರತೆ, ರಸ್ತೆ ಬದಿಯ ಪೊದೆಯಿಂದ ದಿಢೀರನೆ ಹೊರಬರುವ ಕರಡಿ, ಮರಿಗಳೊಂದಿಗೆ ಸಾಗುವ ಆನೆಗಳ ಹಿಂಡು, ಕೆರೆಗಳ ಬಳಿ ಕಂಡು ಬರುವ ಕಡವೆ ಜೋಡಿಗಳು, ಚಿಗುರು ಹುಲ್ಲು ಮೇಯುತ್ತಾ ವಿಹರಿಸುವ ಜಿಂಕೆಗಳ ಚಿತ್ರ ಸೆರೆಹಿಡಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಆದರೆ ಬೇಸಿಗೆ ಸಂದರ್ಭದಲ್ಲಿ ಕಾಣುತ್ತಿದ್ದ ಹುಲಿಗಳು ಹೆಚ್ಚಾಗಿ ಕಾಣಸಿಗದೆ ಪ್ರವಾಸಿಗರು ನಿರಾಶರಾಗುತ್ತಿದ್ದಾರೆ.

ಹಾಳಾದ ಸಫಾರಿ ರಸ್ತೆ
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಂಡೀಪುರ ಸಫಾರಿ ಮಾರ್ಗದ ಎಲ್ಲ ರಸ್ತೆಗಳು ಕೊರೆದುಹೋಗಿವೆ. ರಸ್ತೆಗಳಿಗೆ ಜರುಬು ಹಾಕಿಸಲೂ ಮಳೆ ಬಿಡುವು ಕೊಡದ ಪರಿಣಾಮ ತಗ್ಗು ಪ್ರದೇಶದ ರಸ್ತೆಗಳು ಕೆಸರು ಗದ್ದೆಗಳಾಗಿದ್ದು ವಾಹನಗಳ ಸಂಚಾರಕ್ಕೆ ಸವಾಲಾಗುತ್ತಿವೆ. ಕೆಲ ದಿನಗಳ ಹಿಂದೆ ಸಫಾರಿಗೆ ಹೋಗಿದ್ದ ವಾಹನಗಳು ಕೆಸರಿನಲ್ಲಿ ಹೂತಿಕೊಂಡಿದ್ದವು. ಸಫಾರಿ ವಾಹನಗಳ ಸವಾರರು ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದೊಯ್ಯುವ ಮೂಲಕ ಮಳೆಗಾಲದಲ್ಲಿಯೂ ಸಫಾರಿ ನಿಲ್ಲದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ಬಂಡೀಪುರ ಅರಣ್ಯಕ್ಕೆ ಉತ್ತಮ ಮಳೆ ಬಿದ್ದಿರುವುದರಿಂದ ಹುಲಿ ಸಂರಕ್ಷಿತ ಪ್ರದೇಶದ ಎಲ್ಲ ಕೆರೆ-ಕಟ್ಟೆಗಳೂ ಕೋಡಿಬಿದ್ದು ಹೊಳೆಗಳು ಉಕ್ಕಿ ಹರಿಯುತ್ತಿವೆ. ಬೇಸಿಗೆಯಲ್ಲಿ ಬೇರೆಡೆ ತೆರಳಿದ್ದ ವನ್ಯಜೀವಿಗಳು ಹಿಂದಿರುಗಿರುವುದರಿಂದ ಎಲ್ಲ ಕಡೆಗಳಲ್ಲೂ ಕಾಣಸಿಗುತ್ತಿವೆ.ಎನ್.ಪಿ.ನವೀನ್‌ಕುಮಾರ್, ಎಸಿಎಫ್‌ಬಂಡೀಪುರ ಉಪವಿಭಾಗ

ಈ ಬಾರಿ ಬಿದ್ದಿರುವ ಮಳೆಯಿಂದ ಸಫಾರಿ ಮಾರ್ಗದ ಹೆಚ್ಚಿನ ರಸ್ತೆಗಳು ಹಾಳಾಗಿವೆ. ಮಳೆ ನಿಂತ ಕೂಡಲೇ ಇವುಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು.ಮಲ್ಲೇಶ್, ಆರ್‌ಎಫ್‌ಒ ಗೋಪಾಲಸ್ವಾಮಿ ಬೆಟ್ಟ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net