

ಗುಂಡ್ಲುಪೇಟೆ: ತಾಲೂಕಿನ ಹಂಗಳಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸಿಕ್ಕಿದ್ದ ಚಿರತೆ ಮರಿಗಳನ್ನು ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ.
ಗುರುವಾರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವಾಗ ಎರಡು ಚಿರತೆ ಮರಿಗಳು ಪತ್ತೆಯಾಗಿದ್ದವು. ವಿಷಯ ತಿಳಿದ ಬಫರ್ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಮಾರು ಒಂದೂವರೆ ತಿಂಗಳಿನ ಮರಿಗಳ ಕಿವಿ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯಗಳಾಗಿದ್ದರಿಂದ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದರು. ಮರಿಗಳನ್ನು ತಾಯಿಯೊಂದಿಗೆ ಸೇರಿಸಲು ಗುರುವಾರ ಜಮೀನಿನಲ್ಲಿ ಬೋನು ಅಳವಡಿಸಿ ಮರಿಗಳನ್ನು ಅದರೊಳಗೆ ಇರಿಸಿದರೂ ತಾಯಿ ಮಾತ್ರ ಅತ್ತ ಸುಳಿಯಲಿಲ್ಲ. ಇದರಿಂದ ಮರಿಗಳನ್ನು ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ತಂದು ಆರೈಕೆ ಮಾಡುತ್ತಿದ್ದಾರೆ.
ಅರಣ್ಯ ಇಲಾಖೆ ಪಶುವೈದ್ಯ ಡಾ.ವಾಸಿಂ ಮಿರ್ಜಾ ಸಲಹೆ ಮೇರೆಗೆ ಚಿರತೆಯ ಮರಿಗಳಿಗೆ ಸಿರಿಂಜಿನಲ್ಲಿ ಹಾಲುಣಿಸುತ್ತಿದ್ದಾರೆ. ಎರಡೂ ಮರಿಗಳು ತುಂಬಾ ಚಟುವಟಿಕೆಯಿಂದ ಕೂಡಿದ್ದು ಕಚೇರಿಯ ಮೂಲೆಯಲ್ಲಿ ಒಂದರ ಮೇಲೊಂದು ತಲೆಯಿಟ್ಟು ಮಲಗುತ್ತಿವೆ.
ಇನ್ನೂ ಎರಡು ದಿನ ರಾತ್ರಿ ವೇಳೆ ಬೋನಿನಲ್ಲಿ ಮರಿಗಳನ್ನು ಇಡಲಾಗುವುದು. ತಾಯಿ ಬರದೇ ಇದ್ದಲ್ಲಿ ಕೂರ್ಗಹಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುವುದು ಎಂದು ಬಫರ್ ವಲಯದ ಪ್ರಭಾರ ಆರ್.ಎಫ್.ಒ ಸತೀಶ್ ವಿಜಯವಾಣಿಗೆ ತಿಳಿಸಿದ್ದಾರೆ.