

ಚಾಮರಾಜನಗರ: ಗುಂಡ್ಲುಪೇಟೆ ಪುರಸಭೆಯ 10ನೇ ಅವಧಿಗೆ ಅಧ್ಯಕ್ಷ/ಉಪಾಧ್ಯಕ್ಷ ಚುನಾವಣೆಯನ್ನು ಸೆ.4ರಂದು ನಡೆಸಲಿದ್ದು, ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಸೆ.4ರಂದು ಗುಂಡ್ಲುಪೇಟೆಯ ಪುರಸಭಾ ಕಚೇರಿಯ ಸಭಾಭವನದಲ್ಲಿ ಚುನಾವಣೆ ನಡೆಯಲಿದ್ದು, ಬೆಳಗ್ಗೆ 10.30 ರಿಂದ 12 ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಪರಿಶೀಲನೆ ಕಾರ್ಯವು ಮಧ್ಯಾಹ್ನ 12 ರಿಂದ 12.30 ಗಂಟೆಯವರೆಗೆ ನಡೆಯಲಿದೆ. ಮಧ್ಯಾಹ್ನ 12.30ರ ನಂತರ ಕ್ರಮಬದ್ಧವಾದ ಅಭ್ಯರ್ಥಿಗಳ ನಾಮಪತ್ರಗಳು ಹಾಗೂ ತಿರಸ್ಕೃತ ಅಭ್ಯರ್ಥಿಗಳ ನಾಮಪತ್ರ ಪಟ್ಟಿ ಪ್ರಕಟಿಸಲಾಗುತ್ತದೆ. 12.30 ರಿಂದ 1 ಗಂಟೆಯವರೆಗೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕಾಲಾವಕಾಶವಿದೆ. ನಾಮಪತ್ರಗಳ ವಾಪಸ್ ಪಡೆಯುವ ಅವಧಿ ಮುಗಿದ ನಂತರ ನಾಮಪತ್ರಗಳ ವಾಪಸ್ ಪಡೆದ ಅಭ್ಯರ್ಥಿಗಳ ಹೆಸರು ಮತ್ತು ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರನ್ನು ಅಂತಿಮವಾಗಿ ಪ್ರಕಟಿಸಲಾಗುತ್ತದೆ. ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟಣೆ ತರುವಾಯ (ಅಗತ್ಯವಿದ್ದಲ್ಲಿ) ಮತದಾನವು ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ. 2 ಗಂಟೆಯ ಬಳಿಕ ಅಥವಾ ಮತದಾನ ಮುಗಿದ ನಂತರ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆಯಾಗಲಿದೆ. ಅಧ್ಯಕ್ಷರ ಸ್ಥಾನ ಹಿಂದುಳಿದ ವರ್ಗ ಬಿ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಅಧಿಸೂಚನೆಯಾಗಿರುತ್ತದೆ. ಅಧ್ಯಕ್ಷರ ನಾಮಪತ್ರಕ್ಕೆ ಒಬ್ಬರು ಸದಸ್ಯರು ಮಾತ್ರ ಸೂಚಕರಾಗಬೇಕು. ಸ್ಪರ್ಧಿಸುವ ಉಮೇದುದಾರರು, ಅಭ್ಯರ್ಥಿ ತಮ್ಮ ಉಮೇದುವಾರಿಕೆ ಅರ್ಜಿಯನ್ನು ಹಿಂಪಡೆದ ನಂತರ ಅದನ್ನು ಪುನಹ ಹಿಂಪಡೆಯಲು/ರದ್ದುಪಡಿಸಲು ಅವಕಾಶವಿರುವುದಿಲ್ಲ. ಮತ ಎಣಿಕೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತಗಳು ಸಮಾನ ಬಂದರೆ ಚೀಟಿ ಎತ್ತುವುದರ ಮೂಲಕ ಫಲಿತಾಂಶ ನಿರ್ಧರಿಸಲಾಗುವುದು ಎಂದು ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್‌ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.