ಶೀಘ್ರದಲ್ಲೇ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ

NAGARJUNAKUMAR
Published on

ಗುಂಡ್ಲುಪೇಟೆ: ಸೂರ್ಯಕಾಂತಿಗೆ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ 7,220 ರೂ.ನಿಗದಿ ಮಾಡಿದ್ದು, ಸದ್ಯದಲ್ಲಿಯೇ ಖರೀದಿ ಕೇಂದ್ರಗಳನ್ನು ತೆರೆಯಲಿದೆ. ರೈತರು ದಲ್ಲಾಳಿಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡದಂತೆ ಅರಿಶಿಣ ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್ ಮನವಿ ಮಾಡಿದರು.

ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ 35 ಸಾವಿರ ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದ್ದು, ಈಗಾಗಲೇ ಹಲವೆಡೆ ಕಟಾವಿಗೆ ಬಂದಿದೆ. ದಲ್ಲಾಳಿಗಳು ಕ್ವಿಂಟಾಲ್‌ಗೆ 3 ರಿಂದ 4 ಸಾವಿರ ರೂ.ಖರೀದಿಸುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇನ್ನು 10 ದಿನದೊಳಗೆ ಖರೀದಿ ಕೇಂದ್ರ ತೆರೆಯುವ ನಿರೀಕ್ಷೆ ಇದೆ. ಆದ್ದರಿಂದ ಬೆಳೆ ಕಟಾವು ಮಾಡಿದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡದೆ ದಾಸ್ತಾನು ಮಾಡಿಕೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.

ಸರ್ಕಾರ ಎಲ್ಲ ಜಿಲ್ಲೆಗಳಲ್ಲಿನ ಸೂರ್ಯಕಾಂತಿ ಕಟಾವಿನ ಆಧಾರದ ಮೇಲೆ ಒಟ್ಟಾರೆಯಾಗಿ ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯುವುದರಿಂದ ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆಯಲು ತಡವಾಗುತ್ತದೆ. ಹಾಗಾಗಿ ರೈತರು ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಬಾರದು. ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ 24 ಗಂಟೆಯೊಳಗೆ ಅನುಮೋದನೆ ಪಡೆದಿದೆ. ರಾಜ್ಯ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡಿರುವಂತೆಯೇ ಸೂರ್ಯಕಾಂತಿ ಬೆಳೆಗೂ ನೀಡಿದರೆ ಎಣ್ಣೆ ಕಾಳು ಉತ್ಪನ್ನಗಳಿಗೆ ಹೊರ ದೇಶಗಳನ್ನು ಅವಲಂಬಿಸುವುದು ತಪ್ಪುತ್ತದೆ ಎಂದರು. ರೈತ ಮುಖಂಡರಾದ ಚಿದಾನಂದ, ಶಶಿಕುಮಾರ್, ವೀರನಪುರ ನಾಗರಾಜು, ಶ್ಯಾನಡ್ರಹಳ್ಳಿ ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net