

ಗುಂಡ್ಲುಪೇಟೆ: ಕಬ್ಬಿನ ಗದೆಯಲ್ಲಿ ಸಿಕ್ಕ ಚಿರತೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ತಾಲೂಕಿನ ಹಂಗಳಪುರ ಗ್ರಾಮದಲ್ಲಿ ಕಬ್ಬು ಕಟಾವು ಮಾಡುವ ವೇಳೆ ಕಾರ್ಮಿಕರ ಗಲಾಟೆಯಿಂದ ವಿಚಲಿತವಾದ ಚಿರತೆ ತನ್ನ ಎರಡು ಮರಿಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದೆ. ವಿಷಯ ತಿಳಿದ ಬಫರ್ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಸುಮಾರು ಒಂದೂವರೆ ತಿಂಗಳ ಮರಿಗಳ ಕಿವಿ ಹಾಗೂ ಮೈಮೇಲೆ ಅಲ್ಲಲ್ಲಿ ಗಾಯಗಳಾಗಿದ್ದರಿಂದ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಲಾಗಿದೆ. ಮರಿಗಳನ್ನು ತಾಯಿಯೊಂದಿಗೆ ಸೇರಿಸಲು ಬೋನು ಅಳವಡಿಸಿ ಅದರೊಳಗೆ ಇರಿಸಲಾಗುವುದು. ಒಂದು ವೇಳೆ ತಾಯಿ ಮರಿಗಳ ಹತ್ತಿರಕ್ಕೆ ಬರದಿದ್ದರೆ ಕೂರ್ಗಹಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಕಳಿಸಲಾಗುವುದು ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಸತೀಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.