ಏಳನೇ ವೇತನ ಆಯೋಗದ ಸೌಲಭ್ಯ ಒದಗಿಸಿ

Published on

ಗುಂಡ್ಲುಪೇಟೆ: ಏಳನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯಗಳನ್ನು ನಮಗೂ ಒದಗಿಸಬೇಕು ಎಂದು ನಿವೃತ್ತ ಸರ್ಕಾರಿ ನೌಕರರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಗುರುವಾರ ಪಟ್ಟಣದ ತಾಲೂಕು ಕಚೇರಿಗೆ ತೆರಳಿದ ನಿವೃತ್ತ ನೌಕರರು 2024ರ ಜುಲೈ 31ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಅಥವಾ ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ನಿಗದಿಪಡಿಸಲಾದ ಕಾಲ್ಪನಿಕ ವೇತನವನ್ನು ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕ ಹಾಕುವ ಉದ್ದೇಶಗಳಿಗಾಗಿ ಪರಿಗಣಿಸತಕ್ಕದ್ದು.

ಆದರೆ, ಸದರಿ ಕಾಲ್ಪನಿಕ ಮರು ನಿಗದಿಯ ಆರ್ಥಿಕ ಲಾಭವು ನಿವೃತ್ತಿ ಹೊಂದಿದ ಸರ್ಕಾರಿ ನೌಕರನಿಗೆ ಅಥವಾ ಮರಣ ಹೊಂದಿದ ಸರ್ಕಾರಿ ನೌಕರನ ಫಲಾನುಭವಿಗೆ ಸಂದರ್ಭಾನುಸಾರ 2024ರ ಆಗಸ್ಟ್ 1ರಿಂದ ಪ್ರಾಪ್ತವಾಗತಕ್ಕದ್ದು ಎಂಬ ಆದೇಶವಿದ್ದರೂ 2022ರ ಜುಲೈ 1ರಿಂದ 2024ರ ಜುಲೈ 31ರವರೆಗೆ (25 ತಿಂಗಳ ಅವಧಿಯಲ್ಲಿ) ನಿವೃತ್ತರಾದ/ನಿಧನ ಹೊಂದಿದ ಅಧಿಕಾರಿ/ನೌಕರರಿಗೆ ಪರಿಷ್ಕೃತ ವೇತನದನ್ವಯ ಹಲವು ಸವಲತ್ತುಗಳನ್ನು ಕೈಬಿಟ್ಟು ಹಳೆಯ ವೇತನ ಶ್ರೇಣಿ ಮೇಲೆ ಪರಿಗಣಿಸಲಾಗುತ್ತಿದೆ. ಇದರಿಂದ ನಿವೃತ್ತಿ ಜೀವನದ ಸಂಧ್ಯಾಕಾಲದಲ್ಲಿರುವ ನಮಗೆ ಆಘಾತವಾಗಿರುತ್ತದೆ. ಆದ್ದರಿಂದ 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯಗಳನ್ನು ಕೊಡಿಸಿಕೊಡಬೇಕು ಎಂಬ ಮನವಿ ಪತ್ರವನ್ನು ತಹಸೀಲ್ದಾರ್ ಟಿ.ರಮೇಶ್ ಬಾಬು ಅವರಿಗೆ ಸಲ್ಲಿಸಿದರು. ಕೆ.ಎನ್.ಶಿವಸ್ವಾಮಿ, ಕೆ.ಸಿ.ಕೆಂಪರಾಜು, ಅಂಕಪ್ಪ, ಎಚ್.ಬಿ.ನಾಗರಾಜಪ್ಪ, ಗೋಪಮ್ಮ, ಬಿ.ಕೆ.ನಂಜಪ್ಪ, ಕೆ.ಎಸ್.ರಾಜಶೇಖರಪ್ಪ, ಯು.ಎಂ.ಸಿದ್ದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net