

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ವಿಶ್ವ ಹಾವಿನ ದಿನ ಆಚರಿಸಲಾಯಿತು. ವನ್ಯಜೀವಿ ಛಾಯಾಗ್ರಾಹಕ, ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಆರ್.ಕೆ.ಮಧು ವಿದ್ಯಾರ್ಥಿಗಳಿಗೆ ಹಾವುಗಳ ಕುರಿತು ವಿವರಿಸಿದರು.
ಪ್ರಪಂಚದಲ್ಲಿ 3,600ಕ್ಕೂ ಹೆಚ್ಚು ಪ್ರಭೇದದ ಹಾವುಗಳಿದ್ದು, ಭಾರತದಲ್ಲಿ ಸುಮಾರು 278 ವಿಧದ ಹಾವುಗಳಿವೆ. ಇವುಗಳಲ್ಲಿ ನಾಗರ, ಕಾಳಿಂಗ, ಮಂಡಲ, ಕಟ್ಟುಹಾವು, ಸಮುದ್ರದ ಹಾವು ಹಾಗೂ ಮಲಬಾರ್ ಪಿಟ್ ವೈಪರ್ ಸೇರಿದಂತೆ 6 ಜಾತಿಯ ಹಾವುಗಳು ಮಾತ್ರ ವಿಷಯುಕ್ತವಾಗಿವೆ. ಉಳಿದವು ನಿರಪಾಯಕಾರಿಯಾಗಿದ್ದು, ಪರಿಸರ ಹಾಗೂ ರೈತಮಿತ್ರ ಕೂಡ ಆಗಿವೆ. ಕೆಲವು ಹಾವುಗಳು ಇಲಿಗಳನ್ನು ಹಿಡಿದು ತಿಂದು ನಮ್ಮ ಆಹಾರ ಪದಾರ್ಥ ರಕ್ಷಿಸುತ್ತವೆ ಎಂದರು.
ತಾವು ಸೆರೆಹಿಡಿದ ಹಾವುಗಳ ಚಿತ್ರಗಳನ್ನು ಮಕ್ಕಳಿಗೆ ಪ್ರದರ್ಶಿಸಿ ಗುಣಲಕ್ಷಣಗಳನ್ನು ವಿವರಿಸಿದರು. ಅಲ್ಲದೆ, ತಾವು ಬರೆದ ‘ಹಾವಿನ ಹಾದಿ’ ಕಿರು ಪುಸ್ತಕವನ್ನು ಮಕ್ಕಳಿಗೆ ವಿತರಿಸಿದರು. ವಿಜ್ಞಾನ ಶಿಕ್ಷಕ ಮಂಜು ಮಾತನಾಡಿ, ಹಾವು ಕಡಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು. ಶಿಕ್ಷಕ ಮಂಜುನಾಥ್, ನಂಜುಂಡಸ್ವಾಮಿ ಇತರರು ಇದ್ದರು.