ರಸ್ತೆಗಳ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ

12 HANUR 4
Published on

ಗುಂಡ್ಲುಪೇಟೆ: ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿ ಹಾಗೂ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಮಂಡಲಿ ಸದಸ್ಯ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು.

ಸೋಮವಾರ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ 42 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಹಾಗೂ ಡಿಜಿಟಲ್ ಗ್ರಂಥಾಲಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಗ್ರಾಮೀಣ ಪ್ರದೇಶಗಳ ಜನರಿಗೆ ಅಗತ್ಯವಾದ ಕೆಲಸ ಕಾರ್ಯಗಳನ್ನು ಮಾಡಲಾಗುವುದು. ವಡ್ಡಗೆರೆಯನ್ನು ಗ್ರಾಮ ಪಂಚಾಯಿತಿ ಕೇಂದ್ರವಾಗಿಸಿದ್ದರೂ ಅಗತ್ಯವಾದ ಕಟ್ಟಡವಿಲ್ಲದೆ ಸಣ್ಣ ಕಚೇರಿಯಲ್ಲಿ ನಡೆಸಲಾಗುತ್ತಿತ್ತು. ಇದಕ್ಕೆ 42 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅನುದಾನ ನೀಡಿ ಅಬ್ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಈ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಹಿಂದುಳಿದ ಗ್ರಾಮಗಳಾದ ಚಿರಕನಹಳ್ಳಿ, ಕರಕಲಮಾದಹಳ್ಳಿ ಮುಂತಾದ ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಹುತ್ತೂರು ಏತ ನೀರಾವರಿ ಮೂಲಕ ಪ್ರತಿ ವರ್ಷವೂ ತಾಲೂಕಿನ ವಡ್ಡಗೆರೆ ಹಾಗೂ ಮುಂದಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಿದ್ದ ಶಾಲಾ ಕೊಠಡಿಯನ್ನು ಉದ್ಘಾಟಿಸಿದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ವಡ್ಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಚನ್ನಬಸಪ್ಪ, ಶಿವಕುಮಾರ್, ವೆಂಕಟರಾಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಪಿ.ಮಮತಾ, ಕಾರ್ಯದರ್ಶಿ ಗೋವಿಂದರಾಜು, ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕಾಧಿಕಾರಿ ಪೂರ್ಣಿಮಾ, ಪಂಚಾಯತ್‌ರಾಜ್ ಉಪ ವಿಭಾಗದ ಇಂಜಿನಿಯರ್ ಸಿಂಧು, ಮುಖಂಡರಾದ ಜಿ.ಮಡಿವಾಳಪ್ಪ, ವೈ.ಎನ್.ರಾಜಶೇಖರ್, ಪ್ರಭುಸ್ವಾಮಿ, ಕೆ.ಎನ್.ಮಾದಪ್ಪ, ಶಿವಣ್ಣ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net