ವಿಶ್ವ ಸಿಂಹಗಳ ದಿನ ಆಚರಣೆ

11-GPT-2 (1)
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ವಿಶ್ವ ಸಿಂಹಗಳ ದಿನ ಆಚರಿಸಲಾಯಿತು.

ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಆಫ್ರಿಕಾದ ಸಿಂಹ ಹಾಗೂ ಏಷ್ಯಾದ ಸಿಂಹಗಳು ಎಂದು ಎರಡು ಬಗೆಯ ಸಿಂಹಗಳಿವೆ. ಆಫ್ರಿಕಾದ ಸಿಂಹಗಳು ಆಫ್ರಿಕಾದಲ್ಲಿಯೂ ಏಷ್ಯಾದ ಸಿಂಹಗಳೂ ಭಾರತದಲ್ಲಿ ಮಾತ್ರ ನೆಲೆಸಿವೆ. ವಿಶ್ವದಾದ್ಯಂತ ಸುಮಾರು 23 ಸಾವಿರ ಸಿಂಹಗಳಿವೆ. ಆದರೆ ಭಾರತದಲ್ಲಿ ಕೇವಲ 624 ಸಿಂಹಗಳಿದ್ದು, ತೀರಾ ವಿನಾಶದಂಚಿನಲ್ಲಿವೆ ಎಂದರು.

ಭಾರತದಲ್ಲಿ ಮಾತ್ರ ಅದೂ ಗುಜರಾತ್‌ನ ಸಾಸನ್ ಗಿರ್ ವನ್ಯಜೀವಿ ಧಾಮದಲ್ಲಿ ಇರುವ ಸಿಂಹಗಳು ಭಾರತದ ಹೆಮ್ಮೆ ಎಂದು ಹೇಳಿದರು. ಸ್ವಾತಂತ್ರೃ ಪೂರ್ವದಲ್ಲಿ ಮಧ್ಯಪ್ರದೇಶದಿಂದ ಭಾರತದ ಉತ್ತರದಲ್ಲಿ ನೆಲೆಕಂಡುಕೊಂಡಿದ್ದ ಸಿಂಹಗಳು ದೆಹಲಿಯಲ್ಲೂ ನೆಲೆಸಿದ್ದವು. ಮಾನವನ ದುರಾಸೆ ಹಾಗೂ ಅರಣ್ಯ ನಾಶದಿಂದ ಇವು ವಿನಾಶದಂಚಿನಲ್ಲಿವೆ. ಇವು ಕೇವಲ ಗಿರ್‌ನಲ್ಲಿ ನೆಲೆಸಿರುವುದರಿಂದ ಸಾಂಕ್ರಾಮಿಕ ರೋಗದ ಭಯದ ನೆರಳಲ್ಲಿ ಬದುಕುತ್ತಿವೆ. ಇತ್ತೀಚೆಗೆ ಆಫ್ರಿಕಾದಿಂದ ಚೀತಾಗಳನ್ನು ತಂದು ಬಿಟ್ಟಿರುವ ಹಿನ್ನೆಲೆಯಲ್ಲಿ ಸಿಂಹಗಳನ್ನೂ ಸಹ ಮಧ್ಯಪ್ರದೇಶದ ಪುಲ್ಪುರ್ ಕುನೋ ಕಾಡಿಗೆ ಪರಿಚಯಿಸುವ ಕೆಲಸ ಶೀಘ್ರ ಆಗಬೇಕು ಎಂದು ಅಭಿಪ್ರಾಯಪಟ್ಟರು. ಶಾಲೆಯ ಸಹಶಿಕ್ಷಕ ನಂಜುಂಡಸ್ವಾಮಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net