ಪ್ರಾಂಶುಪಾಲರ ಅಮಾನತಿಗೆ ಶಿಫಾರಸು

18-GPT-5
Published on

ಗುಂಡ್ಲುಪೇಟೆ: ತಾಲೂಕಿನ ಯಡವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಾಂಸಾಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲ ಕುಮಾರಸ್ವಾಮಿಯನ್ನು ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ.

ಭಾನುವಾರ ವಸತಿ ನಿಲಯದಲ್ಲಿ ಕೋಳಿ ಮಾಂಸದೂಟ ಮಾಡಿದ್ದ ಸುಮಾರು 40ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ ಮಾಡಿಕೊಂಡಿದ್ದರು. ವಿದ್ಯಾರ್ಥಿ ಗಗನ್ ಎಂಬಾತನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಎಲ್ಲ ವಿದ್ಯಾರ್ಥಿಗಳಿಗೂ ಬೇಗೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಯಾವುದೇ ತೊಂದರೆ ಇಲ್ಲದ ಕಾರಣ ಅವರ ಮನೆಗಳಿಗೆ ಕಳುಹಿಸಲಾಗಿದೆ. ಪ್ರಾಂಶುಪಾಲ ಕುಮಾರಸ್ವಾಮಿ ವಿರುದ್ಧ ಶಿಶ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.

ಸದನದಲ್ಲಿ ಸದ್ದು ಮಾಡಿದ ಘಟನೆ: ಘಟನೆ ಬಗ್ಗೆ ಮೈಸೂರು ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸ ಸದನದಲ್ಲಿ ಮಾತನಾಡಿ ಸರ್ಕಾರದ ಗಮನ ಸೆಳೆದರು. ಚಾಮರಾಜನಗರ ಲೋಕಾಯುಕ್ತ ಎಸ್‌ಪಿ ಸುರೇಶ್‌ಬಾಬು, ಚಾಮುಲ್ ಮಾಜಿ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಅವರು ಮಕ್ಕಳನ್ನು ಭೇಟಿ ನೀಡಿ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net