

ಗುಂಡ್ಲುಪೇಟೆ: ಯುವಜನತೆ ಗುರು ಹಿರಿಯರು ಹಾಗೂ ಪಾಲಕರಿಗೆ ಗೌರವ ಕೊಡುವುದನ್ನು ಇಂದಿಗೂ ಪಾಲಿಸುತ್ತಿರುವುದರಿಂದಲೇ ಭಾರತೀಯ ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಶಿವಾನಂದ ಅಭಿಪ್ರಾಯಪಟ್ಟರು.
ತಾಲೂಕಿನ ಕೊಡಸೋಗೆ ಗ್ರಾಮದ ಜೆಎಸ್‌ಎಸ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಸಹೋದ್ಯೋಗಿಗಳೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಗುರುಶಿಷ್ಯರ ಸಂಬಂಧ ಅತ್ಯಂತ ಮೌಲ್ಯಯುತವಾಗಿದೆ. ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ವಿದ್ಯೆ ಜತೆಗೆ ಸಂಸ್ಕೃತಿಯ ಬಗ್ಗೆ ಕಲಿಸುವುದರಿಂದಲೇ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಸಾಧ್ಯವಾಗಿದೆ. ಹತ್ತು ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸದ್ಯ ಸಮಾಜದ ಉನ್ನತ ಸ್ಥಾನದಲ್ಲಿದ್ದರೆ ಹಲವಾರು ಹೆಣ್ಣುಮಕ್ಕಳು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೂ ಅಂದಿನ ದಿನಗಳಲ್ಲಿ ತಮಗೆ ವಿದ್ಯೆಕಲಿಸಿದ ಗುರುಗಳನ್ನು ಒಂದೆಡೆ ಸೇರಿಸಿ ಗುರುವಂದನೆ ಆಯೋಜಿಸಿರುವುದು ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2015ರಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರಾದ ಶಿವಕುಮಾರ್, ಶಿವಾನಂದ, ಮಹಾಂತದೇವರು, ಜಗದೀಶ್, ಮೋಹನ್, ಗೀತಾ, ಸಹಾಯಕ ಚನ್ನಪ್ಪ ಅವರಿಗೆ ಮೈಸೂರು ಪೇಟ, ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಶಾಲೆಯ ಸ್ಥಳದಾನಿ ಕೆ.ಎಸ್.ಕರಿಬಸಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಶಿವಪ್ರಸಾದ್, ಟೈಲರ್ ಸಿದ್ದಮಲ್ಲಪ್ಪ, ಹಳೆಯ ವಿದ್ಯಾರ್ಥಿಗಳು ಹಾಗೂ ಕುಟುಂಬದ ಸದಸ್ಯರು, ಗ್ರಾಮಸ್ಥರು ಇದ್ದರು.