ವಿಜೃಂಭಣೆಯ ವೆಂಕಟರಮಣಸ್ವಾಮಿ ರಥೋತ್ಸವ

10-GPT-1-
Published on

ಗುಂಡ್ಲುಪೇಟೆ: ತಾಲೂಕಿನ ಹುಲಿಗಿನಮುರಡಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮೊದಲನೇ ಶ್ರಾವಣ ಶನಿವಾರದ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಚಿಕ್ಕತಿರುಪತಿ ಎಂದೇ ಕರೆಯಲಾಗುವ ದೇವಾಲಯದಲ್ಲಿ ನಡೆದ ಚಿಕ್ಕ ಜಾತ್ರೆಗೆ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಮಧ್ಯಾಹ್ನ 12 ಗಂಟೆಗೆ ಉತ್ಸವ ಮೂರ್ತಿಗಳನ್ನು ರಥದಲ್ಲಿರಿಸಿ ಪೂಜೆ ಸಲ್ಲಿಸಿದ ನಂತರ ರಥೋತ್ಸವ ನಡೆಸಲಾಯಿತು. ತಹಸೀಲ್ದಾರ್ ರಮೇಶ್‌ಬಾಬು ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಭಕ್ತರು ಗೋವಿಂದಾ ಗೋವಿಂದಾ ನಾಮಸ್ಮರಣೆಯೊಂದಿಗೆ ರಥವನ್ನು ದೇವಾಲಯದ ಸುತ್ತಲೂ ಎಳೆದರು. ನವದಂಪತಿ ತೇರಿಗೆ ಹಣ್ಣು- ದವನ ಎಸೆದು ಪುನೀತರಾದರು.

ಸಾರಿಗೆ ಸಂಸ್ಥೆಯಿಂದ ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಹಾಗೂ ತೆರಕಣಾಂಬಿಯಿಂದ ವಿಶೇಷವಾಗಿ ಬಸ್‌ಗಳನ್ನು ನಿಯೋಜಿಸಲಾಗಿತ್ತು. ಸಾರಿಗೆ ಸಂಸ್ಥೆ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲಿ ನಿಲ್ಲಿಸುವ ಮೂಲಕ ತೆರಕಣಾಂಬಿ ಠಾಣೆ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net