ಗುಂಡಿ ಬಿದ್ದ ಪಟ್ಟಣದ ರಸ್ತೆಗಳು

06-GPT-3
Published on

ಗುಂಡ್ಲುಪೇಟೆ:ಕಳೆದ ಒಂದು ವರ್ಷದಿಂದ ಯಾವುದೇ ರಸ್ತೆಗಳನ್ನು ನಿರ್ವಹಣೆ ಮಾಡದ ಪರಿಣಾಮ ಪಟ್ಟಣ ಹಾಗೂ ತಾಲೂಕಿನ ರಸ್ತೆಗಳು ಗುಂಡಿಬಿದ್ದು ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಗಿದೆ.

15 ವರ್ಷಗಳ ಹಿಂದೆ ಯುಜಿಡಿ ಅಳವಡಿಸುವ ಕಾಮಗಾರಿ ಸಂದರ್ಭದಲ್ಲಿ ಪಟ್ಟಣದ ಎಲ್ಲ ರಸ್ತೆಗಳನ್ನು ಅಗೆದು ಹಾಕಲಾಗಿತ್ತು. 10 ವರ್ಷಗಳ ಕಾಲ ಕುಂಟುತ್ತಾ ತೆವಳುತ್ತಾ ನಡೆದ ಯುಜಿಡಿ ಕಾಮಗಾರಿಯಿಂದ ಪಟ್ಟಣದ ಯಾವ ರಸ್ತೆಯೂ ಡಾಂಬರ್ ಕಾಣದಂತಾಗಿದ್ದರಿಂದ ಎಲ್ಲ ರಸ್ತೆಗಳೂ ಗುಂಡಿಮಯವಾಗಿದ್ದವು. ಇದರಿಂದ ಮಳೆಗಾಲದಲ್ಲಿ ಯಾವ ರಸ್ತೆಗಳಲ್ಲಿಯೂ ಕಾಲಿಡಲು ಸಾಧ್ಯವಾಗದಂತಾಗಿತ್ತು. ಆದರೆ, ತರಾತುರಿಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿದ ನಂತರ ದಶಕಗಳಿಂದ ಡಾಂಬರು ಕಾಣದ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿತ್ತು. ಪಟ್ಟಣದ ಬಹುತೇಕ ಬಡಾವಣೆಗಳ ರಸ್ತೆಗಳಿಗೆ ಮೊದಲ ಬಾರಿಗೆ ಡಾಂಬರು ಹಾಕಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಯಾದ ಕಿತ್ತೂರುರಾಣಿ ಚನ್ನಮ್ಮ ರಸ್ತೆಯ ಬದಿಗಳಲ್ಲಿ ಟೈಲ್ಸ್ ಅಳವಡಿಸಿ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿತ್ತು. ಇನ್ನೇನು ಎಲ್ಲ ರಸ್ತೆಗಳೂ ಚೆನ್ನಾಗಿವೆ ಎಂದು ಪಟ್ಟಣದ ಜನತೆ ಖುಷಿಪಡುತ್ತಿದ್ದಂತೆ ಕಳೆದ ಆರೇಳು ತಿಂಗಳ ಹಿಂದೆ ಮನೆಗಳಿಗೆ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ ಮತ್ತೆ ರಸ್ತೆಗಳು ಗುಂಡಿ ಬೀಳುವಂತಾಗಿದೆ.

ಈಗಾಗಲೇ ಪಟ್ಟಣದ ಮನೆಗಳಿಗೆ ಕಬಿನಿಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದರೂ ಆಗಾಗ್ಗೆ ತೊಂದರೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಎಕ್ಸ್‌ಪ್ರೆಸ್ ಪೈಪ್‌ಲೈನ್ ಯೋಜನೆ ಕೈಗೊಳ್ಳಲಾಗಿದೆ. ಈ ಯೋಜನೆಯಲ್ಲಿ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸಲು ಡಾಂಬರ್ ಹಾಕಿದ್ದ ಎಲ್ಲ ರಸ್ತೆಗಳನ್ನೂ ಅಗೆಯಲಾಗಿದೆ. ಇದರಿಂದ ಕೋಟ್ಯಂತರ ರೂ.ವೆಚ್ಚದಲ್ಲಿ ಹಾಕಲಾಗಿದ್ದ ಡಾಂಬರ್ ಕಿತ್ತು ಬಂದಿದ್ದು ವಾಹನಗಳ ಸಂಚಾರ ಹಾಗೂ ಮಳೆಯಿಂದ ಗುಂಡಿ ಬಿದ್ದಿವೆ.

ಹೆದ್ದಾರಿ ಬದಿಯಲ್ಲಿ ಕೈಗೊಂಡಿದ್ದ ಎಕ್ಸ್‌ಪ್ರೆಸ್ ಯೋಜನೆಯಲ್ಲಿ ಪಂಪ್‌ಹೌಸ್‌ನಿಂದ ಓವರ್ ಹೆಡ್ ಟ್ಯಾಂಕ್‌ಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಕಾಮಗಾರಿ ಅಪೂರ್ಣವಾಗಿದೆ. ಪಟ್ಟಣದ ಹೊರವಲಯಗಳಲ್ಲಿ, ಮೈಸೂರು ರಸ್ತೆ, ಸುರಭಿ ಹೋಟೆಲ್ ಎದುರು, ಸಾರಿಗೆ ಬಸ್ ನಿಲ್ದಾಣದ ಸಮೀಪ ಹಾಗೂ ಹಳೇ ಬಸ್ ನಿಲ್ದಾಣದ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಲು ತೆರೆದ ಕಂದಕವನ್ನು ಮುಚ್ಚಿಲ್ಲ. ಕಂದಕದಿಂದ ಹೊರತೆಗೆದ ಮಣ್ಣನ್ನು ರಸ್ತೆ ಬದಿಗಳಲ್ಲಿ ಬಿಟ್ಟಿದ್ದಾರೆ. ಇದರಿಂದ ಪ್ರತಿ ದಿನ ಪಾದಚಾರಿಗಳು, ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಚಾಮರಾಜನಗರ ಜೋಡಿ ರಸ್ತೆಯಲ್ಲಿ ಟಿಪ್ಪರ್‌ಗಳ ಸಂಚಾರದಿಂದ ಭಾರಿ ಗುಂಡಿಗಳು ಬಿದ್ದಿವೆ. ಪ್ರವಾಸಿ ಮಂದಿರ, ಕೋಡಹಳ್ಳಿ ಸರ್ಕಲ್ ವೀರಯೋಧ ಶಿವಾನಂದ ಸರ್ಕಲ್ ಮುಂತಾದ ಕಡೆಗಳಲ್ಲಿ ವಾಹನ ಚಲಾಯಿಸಲು ಪರದಾಡಬೇಕಿದೆ. ಒಂದು ಗುಂಡಿ ತಪ್ಪಿಸಲು ಹೋದರೆ ಮತ್ತೊಂದರಲ್ಲಿ ಬೀಳುತ್ತಿದ್ದು ಸವಾರರು ಬಿದ್ದು ಗಾಯಗೊಳ್ಳುವಂತಾಗಿದೆ. ಶಿವಾನಂದ ಸರ್ಕಲ್ ಸಮೀಪ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಕಿತ್ತೂರುರಾಣಿ ಚನ್ನಮ್ಮ ರಸ್ತೆಗೆ ಹೋಗುವ ವಾಹನಗಳ ಚಕ್ರಗಳು ಜಾರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

ಪಟ್ಟಣದಿಂದ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ರಸ್ತೆಯಲ್ಲಿ ಪ್ರಯಾಣ ಮಾಡುವುದು ವಾಹನ ಸವಾರರ ಪಾಲಿಗೆ ತುಂಬಾ ತೊಂದರೆಯಾಗುತ್ತಿದೆ. ಆದರ್ಶ ಶಾಲೆ ಎದುರು, ದೊಡ್ಡತುಪ್ಪೂರು ಗೇಟ್, ಶಿಂಡನಪುರ ಬಳಿ ರಸ್ತೆಯಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಎದುರು ಬರುವ ವಾಹನಗಳಿಗೆ ದಾರಿ ಕೊಡಲು ಸಾಧ್ಯವಾಗದಂತಾಗಿದ್ದು ಪದೇ ಪದೆ ಅಪಘಾತಗಳು ಸಂಭವಿಸುತ್ತಿವೆ. ಕಳೆದ ವರ್ಷ ಡಾಂಬರ್ ಹಾಕಿದ್ದರೂ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಮತ್ತಷ್ಟು ದೊಡ್ಡದಾಗಿವೆ. ರಾತ್ರಿ ಹೊತ್ತು ಸಂಚರಿಸುವ ವಾಹನಗಳು ಅಪಘಾತಕ್ಕೊಳಗಾಗುತ್ತಿವೆ.

ಪಟ್ಟಣದಲ್ಲಿ ಜಲ ಮಂಡಳಿ ವತಿಯಿಂದ ಮನೆಗಳಿಗೆ ಕುಡಿಯುವ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಟ್ರಯಲ್ ಟೆಸ್ಟ್ (ಮನೆಗಳಿಗೆ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ) ಮುಗಿದ ನಂತರ ಅವರೇ ಎಲ್ಲ ರಸ್ತೆಗಳ ಡಾಂಬರ್ ಹಾಕಬೇಕಾಗಿದೆ.ವಸಂತಕುಮಾರಿ, ಪುರಸಭೆ ಮುಖ್ಯಾಧಿಕಾರಿ

ಪಟ್ಟಣಕ್ಕೆ ಕಬಿನಿಯಿಂದ ಕುಡಿಯುವ ನೀರು ಪೂರೈಸುವ ಎಕ್ಸ್‌ಪ್ರೆಸ್ ಪೈಪ್‌ಲೈನ್ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಓವರ್‌ಹೆಡ್ ಟ್ಯಾಂಕ್ ಹಾಗೂ ನದಿಯಿಂದ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ ಸ್ವಲ್ಪ ಬಾಕಿ ಇದೆ. ಮನೆಗಳಿಗೆ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡ ನಂತರ ಡಿಸೆಂಬರ್ ವೇಳೆಗೆ ರಸ್ತೆಗಳಿಗೆ ಡಾಂಬರ್ ಹಾಕುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.ಚಿನ್ನಸ್ವಾಮಿ, ಎಇಇ ಜಲಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net